ಇಂದು ಆರೋಗ್ಯ ಕ್ಷೇತ್ರದ ತಜ್ಞರು ಮತ್ತು ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ..
ದೇಶದಲ್ಲಿ ಓಮೈಕ್ರಾನ್ ಸೋಂಕು ತೀವ್ರವಾಗಿ ಹೆಚ್ಚಾಗುತ್ತಿದ್ದು ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಇನ್ನಷ್ಟು ಹರಡುವ ಸಾಧ್ಯತೆ ಇದೆ. ಇದೇ ಹಿನ್ನೆಲೆಯಲ್ಲಿ ಸಭೆ ಕರೆದ ಮೋದಿ ಮೊದಲು ಹೆಚ್ಚುತ್ತಿರುವ ಓಮೈಕ್ರಾನ್ ಕುರಿತು ಮಾಹಿತಿ ಪಡೆಯಲಿದ್ದಾರೆ. ಬಳಿಕ ಓಮೈಕ್ರಾನ್ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದು ಓಮೈಕ್ರಾನ್ ಸೋಂಕು ಹರಡುವಿಕೆ ತಡೆಯಬೇಕೆಂದು ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಈ ಮಾರ್ಗಸೂಚಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಬೂಸ್ಟರ್ ಡೋಸ್ ಬಳಕೆ ಬಗ್ಗೆ ಚರ್ಚೆ ಸಾಧ್ಯತೆ
ಓಮೈಕ್ರಾನ್ ವಿರುದ್ಧ ಕೊರೋನಾ ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದು ಅದಕ್ಕಾಗಿ ಬೂಸ್ಟರ್ ಡೋಸ್ ಬಳಕೆ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎರಡು ಡೋಸ್ ಪಡೆದವರಿಗೆ ಬೂಸ್ಟರ್ ಡೋಸ್ ನೀಡಲು ಅನುಮತಿ ಕೊಡಿ ಎಂದು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಸಾರ್ವಜನಿಕರಿಂದಲೂ ಬೂಸ್ಟರ್ ಡೋಸ್ ಗಳ ಬಗ್ಗೆ ಬೇಡಿಕೆಗಳು ಕೇಳಿಬರುತ್ತಿವೆ. ಆದುದರಿಂದ ಬೂಸ್ಟರ್ ಡೋಸ್ ಬಳಕೆ ಮಾಡುವ ಬಗ್ಗೆ ತಜ್ಞರ ಅಭಿಪ್ರಾಯ ಕೇಳಲಿದ್ದಾರೆ ಮೋದಿ ಎಂದು ಗೊತ್ತಾಗಿದೆ.
ಕರೋನಾ 3ನೇ ಅಲೆ ಬಗ್ಗೆ ಚರ್ಚೆ
ಮುಂದಿನ ಫೆಬ್ರವರಿ-ಮಾರ್ಚಿಯಲ್ಲಿ ಮೂರನೇ ಅಲೆ ಕೊರೋನಾ ಬರಬಹುದೆಂದು ಕೆಲವು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ ಮೂರನೇ ಅಲೆಯ ವೇಳೆ ಹೊಸ ರೂಪಾಂತರಿ ತಳಿಗಳು ಬರಬಹುದೆಂದು. ಅವು ಮೊದಲಿಗಿಂತಲೂ ಅಪಾಯಕಾರಿಯಾಗಿರಬಹುದು ಎಂದು ಆತಂಕಕಾರೊ ಭವಿಷ್ಯ ನುಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಇಂತಹುದೇ ಮುನ್ನೆಚ್ಚರಿಕೆ ನೀಡಿದೆ. ಆದುದರಿಂದ ಇಂದಿನ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ ಆಗುವ ಸಾಧ್ಯತೆ ಇದೆ.
ಕಟ್ಟುನಿಟ್ಟಿನ ನಿಯಮ ಜಾರಿಗೆ ಸೂಚನೆ
ದೇಶದಲ್ಲಿ ಓಮೈಕ್ರಾನ್ ಸೋಂಕು ಹೆಚ್ಚಾಗುವ ಲಕ್ಷಣ ಹೊಂದಿರುವ ಹಿನ್ನಲೆ ಕೇಂದ್ರದ ಆರೋಗ್ಯ ಇಲಾಖೆ ಈ ಹಿಂದೆ ಕೋವಿಡ್ ಸೋಂಕು ಸಮಯದಲ್ಲಿ ನಿರ್ಮಾಣ ಮಾಡಿದ್ದ ವಾರ್ ರೂಂ ರೂಪಿಸಲು ಸಮಿತಿ ಸಲಹೆ ನೀಡಿದೆ. ಅಲ್ಲದೇ ರಾಜ್ಯಗಳಲ್ಲಿ ಹಿಂಪಡೆದಿರುವ ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ನಿಯಮ ಜಾರಿಗೆ ತರಲು ಸೂಚನೆ ನೀಡಲಾಗಿದೆ. ರಾಜ್ಯಗಳಲ್ಲಿ ವ್ಯಾಪಕ ಪರೀಕ್ಷೆ, ನಿಯಂತ್ರಣ, ಸೋಂಕು ತಡೆಗಟ್ಟುವಿಕೆಗೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಲಹೆ ನೀಡಿದೆ.
ಆರೋಗ್ಯ ಸಚಿವಾಲಯಕ್ಕೆ ಬರೆಯಲಾದ ಪತ್ರದಲ್ಲಿ ಸೋಂಕು ನಿಯಂತ್ರಣಕ್ಕೆ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕಟ್ಟುನಿಟ್ಟಾದ ಮತ್ತು ತ್ವರಿತ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸಮಿತಿ ತಿಳಿಸಿದೆತೆಲಂಗಾಣದಲ್ಲಿ ಇಂದು ಎರಡು ಓಮೈಕ್ರಾನ್ ಸೋಂಕು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ತೆಲಂಗಾಣ ಇದೆ. ಇನ್ನು ಅರುಣಾಚಲ ಪ್ರದೇಶದಲ್ಲಿ (Arunachal pradesh) ಕೂಡ ಇಂದು ಮೊದಲ ಓಮೈಕ್ರಾನ್ ಪ್ರಕರಣ ದಾಖಲಾಗಿದೆ.
ಬೂಸ್ಟರ್ ಡೋಸ್ ಅಗತ್ಯ
ಓಮೈಕ್ರಾನ್ ಸೋಂಕು ದೇಶದಲ್ಲಿ ಹೆಚ್ಚುತ್ತಿರುವ ಕುರಿತು ಮಾತನಾಡಿರುವ ILBS ನಿರ್ದೇಶಕ ಡಾ ಎಸ್ ಕೆ ಸರಿನ್, ದೇಶದ ಜನರಿಗೆ ಬೂಸ್ಟರ್ ಅತ್ಯಗತ್ಯ ಎಂದಿದ್ದಾರೆ. ಯಾವುದೇ ಲಸಿಕೆಯ ಎರಡು ಡೋಸ್‌ಗಳನ್ನು ಹೊಂದಿರುವಾಗ ನಿಮ್ಮ ರಕ್ಷಣೆಯ ಮಟ್ಟವು ವಿಶೇಷವಾಗಿ 3 ರಿಂದ 6 ತಿಂಗಳ ನಂತರ ಕಡಿಮೆಯಾಗುತ್ತದೆ. ಮೂರನೇ ಡೋಸ್ ಅಥವಾ ಬೂಸ್ಟರ್ ಹೊಂದಿದ್ದರೆ, ತೀವ್ರವಾದ ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ, ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುತ್ತದೆ. ಓಮೈಕ್ರಾನ್ ಸಂದರ್ಭದಲ್ಲಿ ಪರಿಗಣಿಸಬೇಕಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರು ಬೂಸ್ಟರ್ ಅನ್ನು ಪಡೆಯಬೇಕು ಎಂದಿದ್ದಾರೆ.