ಕ್ರೈಂ

ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿ ಸುಲಿಗೆ

ಬೆಂಗಳೂರು: ಮಹಿಳೆಯೊಬ್ಬರ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿ ಸುಲಿಗೆ ಮಾಡಿದ್ದ ಆರೋಪದಡಿ ಆರು ಮಂದಿಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿಗಳು, ಚಿನ್ನಾಭರಣ ಹಾಗೂ ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕರಾದ ಮಹಿಳೆ ದೂರು ನೀಡಿದ್ದರು. ಸದ್ಯ 6 ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ ಮಹಿಳೆಯರು ಇದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂಘಟನೆಯೊಂದರ ಕಾರ್ಯಕರ್ತರೆಂದು ಹೇಳಿಕೊಂಡು ಆರೋಪಿಗಳು ಕೃತ್ಯ ಎಸಗಿದ್ದರು. ಮನೆಯೊಳಗೆ ನುಗ್ಗುವ ವೇಳೆಯಲ್ಲಿ ಸಂಘಟನೆಯೊಂದರ ನೀಲಿಬಣ್ಣದ ಶಾಲು ಸಹ ಧರಿಸಿದ್ದರು. ಬಂಧಿತರಿಂದ ₹152.50 ಗ್ರಾಂ ಚಿನ್ನಾಭರಣ, ₹63,000 ನಗದು, ಮೊಬೈಲ್, ದ್ವಿಚಕ್ರ ವಾಹನ ಹಾಗೂ ಸಂಘಟನೆ ಘೋಷವಾಕ್ಯವಿದ್ದ ಎರಡು ಶಾಲುಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿವೆ. ಡಿ. 12ರಂದು ಪರಿಚಯಸ್ಥರ ಪುರುಷ ಹಾಗೂ ಯುವತಿ, ದೂರುದಾರರ ಮನೆಗೆ ಬಂದಿದ್ದರು. ಮೂವರು ಪರಸ್ಪರ ಮಾತನಾಡುತ್ತ ಕುಳಿತಿದ್ದರು. ಅದೇ ಸಂದರ್ಭದಲ್ಲೇ ಆರೋಪಿಗಳು ಮನೆಯೊಳಗೆ ನುಗ್ಗಿದ್ದರು. ಸಂಘಟನೆ ಸದಸ್ಯರೆಂದು ಹೇಳಿ ಕೂಗಾಡಿದ್ದ ಆರೋಪಿಗಳು, ಪುರುಷನ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿದ್ದರು. ₹5 ಲಕ್ಷ ನೀಡುವಂತೆ ಪುರುಷನನ್ನು ಒತ್ತಾಯಿಸಿದ್ದ ಆರೋಪಿಗಳು, ಹಣ ನೀಡದಿದ್ದರೆ ವಿಡಿಯೊವನ್ನು ಮಾಧ್ಯಮ ಹಾಗೂ ಪೊಲೀಸರಿಗೆ ಕೊಡುವುದಾಗಿ ಬೆದರಿಸಿದ್ದರು.’

ಬೆದರಿದ್ದ ಪುರುಷ, ಫೋನ್‌ ಪೇ ಮೂಲಕ ಸ್ವಲ್ಪ ಹಣ ವರ್ಗಾವಣೆ ಮಾಡಿದ್ದರು. ಹೆಚ್ಚಿನ ಹಣಕ್ಕಾಗಿ ಒತ್ತಾಯಿಸಿದ್ದ ಆರೋಪಿಗಳು, ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ₹1.75 ಲಕ್ಷ ಸುಲಿಗೆ ಮಾಡಿಕೊಂಡು ಮನೆಯ ಬಾಗಿಲನ್ನು ಹೊರಕಿನಿಂದ ಲಾಕ್ ಮಾಡಿ ಪರಾರಿಯಾಗಿದ್ದರು.’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

Related Articles

Leave a Reply

Your email address will not be published. Required fields are marked *

Back to top button