ಅಪಾರ್ಟ್ಮೆಂಟ್ಗೆ ಜಲ ಕಂಟಕ: ಗೌರವ್ ಗುಪ್ತಾ
ಬೆಂಗಳೂರು: ನಗರದಲ್ಲಿ ಭಾನುವಾರ ಸುರಿದ ಭಾರಿ ಮಳೆಯಿಂದಾಗಿ (Heavy rain in Bangalore) ಯಲಹಂಕ ವಲಯ ಕೆಂಪೇಗೌಡ ವಾರ್ಡ್ ವ್ಯಾಪ್ತಿಯ ಯಲಹಂಕ ಕೆರೆ ತುಂಬಿ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ (water logging in apartment) ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿದೆ. ಸ್ಥಳಕ್ಕೆ ಇಂದು ಶಾಸಕ ಎಸ್.ಆರ್. ವಿಶ್ವನಾಥ್, ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ರಾತ್ರಿ ಎರಡು ಗಂಟೆ ಸಮಯದಲ್ಲಿ 130 ಮಿ.ಮೀಗೂ ಹೆಚ್ಚು ಮಳೆಯಾದ ಪರಿಣಾಮ ಯಲಹಂಕ ಕೆರೆ ತುಂಬಿ ಕೆರೆಯ ಕೋಡಿ ಬಿದ್ದು, ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಪರಿಣಾಮ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ನಲ್ಲಿ ಸುಮಾರು 4 ಅಡಿಯಷ್ಟು ನೀರು ನಿಂತು ಜಲಾವೃತಗೊಂಡಿದೆ. ಅಪಾರ್ಟ್ಮೆಂಟ್ನಲ್ಲಿ 604 ಪ್ಲಾಟ್ಗಳಿದ್ದು, 1,600 ನಿವಾಸಿಗಳು ವಾಸಿಸುತ್ತಿದ್ದಾರೆ.
ಮೆನೆಯಲ್ಲಿರುವವರಿಗೆ ಹಾಲು, ಬಿಸ್ಕೆಟ್, ಕ್ಯಾಂಡಲ್, ಬ್ರೆಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. 18 ಎನ್ಡಿಆರ್ಎಫ್ ತಂಡಗಳು ಹಾಗೂ ಅಗ್ನಿ ಶಾಮಕ ತಂಡಗಳು ದೋಣಿಗಳು ಹಾಗೂ ಟ್ರ್ಯಾಕ್ಟರ್ ಮೂಲಕ ನಿವಾಸಿಗಳನ್ನು ಮನೆಯಿಂದ ಹೊರಗೆ ಕರೆತರುವ ಹಾಗೂ ಒಳಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ. ಪಾಲಿಕೆಯ ಕಂದಾಯ ಅಧಿಕಾರಿಗಳ ತಂಡವು ನಿವಾಸಿಗಳ ಮನೆಗೆ ತೆರಳಿ ಏನೇನು ಸಮಸ್ಯೆಯಾಗಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
‘8 ಅಡಿಯ ರಾಜಕಾಲುವೆ 33 ಅಡಿ ಅಗಲ ವಿಸ್ತರಿಸಲು ಸರ್ಕಾರಕ್ಕೆ ಪ್ರಸ್ತಾಪವನೆ’:
ಈ ಮಳೆಯಿಂದಾದ ಸಮಸ್ಯೆ ಕುರಿತು ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯಿಸಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ 130 ಮಿಲಿಮೀಟರ್ಗೂ ಹೆಚ್ಚು ಮಳೆಯಾದ ಪರಿಣಾಮ ಕೆರೆ ತುಂಬಿ ರಾಜಕಾಲುವೆಯಲ್ಲಿ ಹೆಚ್ಚಿನ ನೀರು ಹರಿದು ಅಪಾರ್ಟ್ಮೆಂಟ್ ಜಲಾವೃತಗೊಂಡಿದೆ. ಪಾಲಿಕೆ ವತಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತಿಂಡಿ, ಹಾಲು ವಿತರಣೆ ಕೆಲಸ ಮಾಡಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಪಾರ್ಟ್ಮೆಂಟ್ನಲ್ಲಿ ನಿಂತಿರುವ ನೀರನ್ನು ರಾಜಕಾಲುವೆಯ ಮೂಲಕ ಹರಿದು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ. ಯಲಹಂಕ ಕೆರೆಯಿಂದ ಜಕ್ಕೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯು 8 ಅಡಿ ಅಗಲವಿದ್ದು, ಅದನ್ನು 33 ಅಡಿ ಅಗಲ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖ್ಯ ಇಂಜಿನಿಯರ್ ರಂಗನಾಥ್ ಹಾಗೂ ಇನ್ನಿತರೆ ಅಧಿಕಾರಿಗಳು ಈ ವೇಳೆ ಹಾಜರಿದ್ದರು.