ದೇಶ

ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ

ತಮಿಳುನಾಡಿನಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಮಳೆ ಈಗ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ತನ್ನ ರುದ್ರನರ್ತನವನ್ನು ತೋರುತ್ತಿದೆ. ಅದರಲ್ಲೂ ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದಿಟ್ಟಿದೆ. ತಿರುಮಲ ಮತ್ತು ತಿರುಪತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ತಿರುಪತಿಯ ಹಲವು ತಗ್ಗುಪ್ರದೇಶ ಮತ್ತು ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು ಪ್ರವಾಹ ಕಾಣಿಸಿಕೊಂಡಿದೆ. ಎಲ್ಲಿ ನೋಡಿದರು ನೀರು ತುಂಬಿ ಹೋಗಿದೆ. ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೋಗಳು ವೈರಲ್‌ ಆಗಿವೆ. ಇನ್ನು ತಿರುಮಲ ಬೆಟ್ಟಕ್ಕೆ ಹತ್ತುವ ರಸ್ತೆ ಮಾರ್ಗದಲ್ಲಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಮರಗಳು ಧರೆಗುರುಳಿವೆ.

ಇನ್ನು ತಿರುಮಲ ಬೆಟ್ಟದ ಬುಡದಲ್ಲಿರುವ ಕಪಿಲೇಶ್ವರ ಸ್ವಾಮಿ ದೇಗುಲದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು ಜಲಪಾತದ ರೀತಿಯಲ್ಲಿ ಧುಮ್ಮಿಕ್ಕುತ್ತಿರುವ ದೃಶ್ಯಗಳು ಮೈ ಜುಮ್ಮೆನಿಸುತ್ತಿವೆ. ನಗರದ ಹೊರವಲಯದಲ್ಲಿ ಹರಿಯುವ ಸ್ವರ್ಣಮುಖಿ ನದಿಯಲ್ಲಿ ನೀರಿನ ಮಟ್ಟಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅಕ್ಕಪಕ್ಕದ ಹಳ್ಳಿಗಳ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ಪರಿಣಾಮ ಹಲವು ಹಳ್ಳಿಗಳಲ್ಲಿ ಸೊಂಟದ ಮಟ್ಟದವರೆಗೂ ನೀರು ತುಂಬಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನೂ ಮನೆಗಳಿಗೆ ನೀರು ನುಗ್ಗಿದ್ದು, ಎಲ್ಲ ಸಾಮಾಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ತಿರುಪತಿ ಶ್ರೀ ವೆಂಕಟೇಶ್ವರ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಲಾಗಿದೆ. ಪಾದಯಾತ್ರೆ ಮುಖಾಂತರ ದೇವಸ್ಥಾನಕ್ಕೆ ಹೋಗುವ ಮಾರ್ಗಗಳನ್ನು ಮುಚ್ಚಲಾಗಿದೆ.  ಪ್ರವಾಹದಿಂದ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ರಸ್ತೆ ಮೇಲೆ ಬಿದ್ದಿರುವ ಕಲ್ಲು, ಬಂಡೆ ಹಾಗೂ ಮಣ್ಣು ತೆರವು ಕಾರ್ಯಾಚರಣೆಯೂ ನಡೆಯುತ್ತಿದೆ. ಆದರೆ ಭಾರಿ ಮಳೆ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡುತ್ತಿದೆ.

ಬೆಟ್ಟದಿಂದ ಜಲಪಾತದಂತೆ ದುಮ್ಮಿಕ್ಕುತ್ತಿದೆ ನೀರು!

ತಿರುಪತಿ ತಿಮ್ಮಪ್ಪನ ಬೆಟ್ಟದಿಂದ ಜಲಪಾತದಂತೆ ನೀರು ಧುಮ್ಮಿಕ್ಕುತ್ತಿದೆ. ರಣ ಮಳೆಯಿಂದ ಈ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಆಂಧ್ರಪ್ರದೇಶದ ಸಿಎಂ ಜಗನ್​ ಮೋಹನ್​ ರೆಡ್ಡಿ ತುರ್ತು ಸಭೆ ಕರೆದು ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ಚರ್ಚೆ ನಡೆಸಿದೆ. ಪ್ರವಾಹ ಪೀಡಿತ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ, ಆಹಾರ ಸಾಮಾಗ್ರಿಗಳ ಪೂರೈಕೆ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ತಂಡಗಳನ್ನು ರಚಿಸಲಾಗಿದೆ. ಇಂದು ನಡೆಯಬೇಕಿದ್ದ ಕಾರ್ತಿಕ ದೀಪೋತ್ಸವವು ವಿಶೇಷ ಪೂಜಾ ಕಾರ್ಯಕ್ರವನ್ನು ಮುಂದೂಡಲಾಗಿದೆ. 

ಇನ್ನೂ ಎರಡು ದಿನಗಳ ಕಾಲ ಇದೇ ರೀತಿಯ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಎಚ್ಚರಕೆ ನೀಡಿದೆ. ಬುಧವಾರ, ಗುರುವಾರ ಸುರಿದ ಮಳೆಯಿಂದಗಿ ಇಷ್ಟಲ್ಲಾ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಎರಡು ದಿನ ಮಳೆಯಾದರೆ ತಿರುಪತಿ ತಿಮ್ಮಪ್ಪನೇ ಕಾಪಾಡಬೇಕು ಅಂತಿದ್ದಾರೆ ಜನ.

Related Articles

Leave a Reply

Your email address will not be published. Required fields are marked *

Back to top button