ನವದೆಹಲಿ, ನ. 10: ಇತ್ತೀಚೆಗೆ ರಾಜ್ಯದಲ್ಲಿ ಭಾರೀ ಚರ್ಚೆ ಆಗುತ್ತಿರುವ ಮತ್ತು ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಚರ್ಚೆಗೆ ಮುನ್ನುಡಿ ಬರೆದಿರುವ ಬಿಟ್ ಕಾಯಿನ್ ಹಗರಣದ (Bitcoin Scam) ಬಗ್ಗೆ ಇಂದು ಅಥವಾ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraja Bommai) ಬಿಜೆಪಿ ಹೈಕಮಾಂಡ್ ನಾಯಕರು, ವಿಶೇಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Sha) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ (BJP National President JP Nadda) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಾರೆ ಎನ್ನಲಾಗಿದೆ.

ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬೊಮ್ಮಾಯಿ ಯತ್ನ
ಇಂದು ಮಧ್ಯಾಹ್ನ ಖಾಸಗಿ ಸುದ್ದಿ ಸಂಸ್ಥೆಯ ಕಾನ್ನ ಕ್ಲೇವ್ (Conclave) ನಲ್ಲಿ ಭಾಗವಹಿಸುವ ಮತ್ತು ಕೆಲವು ಕೇಂದ್ರ ಸಚಿವರ ಭೇಟಿಯ ನೆಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಬರುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಾಯಕರನ್ನು (BJP High Command Leaders) ಭೇಟಿಯಾಗುವುದು ಅವರ ಮುಖ್ಯ ಉದ್ದೇಶ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಆದ ಹೊಸದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡ ಎಲ್ಲರೂ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದರು. ಆ ನಂತರದಲ್ಲಿ ಅವರ ಭೇಟಿ ಮಾಡಲು ನಿರಂತರವಾಗಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈಗಲೂ ಬುಧವಾರ ರಾತ್ರಿ ದೆಹಲಿಯಲ್ಲೇ (Delhi) ವಾಸ್ತವ್ಯ ಇದ್ದು ಶತಾತಗತಾಯ ಹೈಕಮಾಂಡ್ ನಾಯಕರನ್ನು ಭೇಟಿ ಆಗಲೇಬೇಕೆಂದು ಬಸವರಾಜ ಬೊಮ್ಮಾಯಿ ನಿಶ್ವಯಿಸಿದ್ದಾರೆ ಎಂದು ಗೊತ್ತಾಗಿದೆ.