ಹುಬ್ಬಳ್ಳಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ನಮ್ಮನ್ನಗಲಿ ಹಲವು ದಿನಗಳು ಗತಿಸಿವೆ. ಆದರೆ ಪುನೀತ್ ರಾಜಕುಮಾರ್ ರನ್ನು ಸ್ಮರಿಸಿಕೊಂಡು ಭಾವುಕರಾಗುತ್ತಿರುವವರ ಕಣ್ಣೀರ ಕೋಡಿಗೆ ಬ್ರೇಕ್ ಬಿದ್ದಿಲ್ಲ. ಅಪ್ಪುನ ನೆನೆರಿಸಿಕೊಂಡು ಕಣ್ಣೀರು ಹಾಕದವರೇ ಇಲ್ಲ. ದೊಡ್ಮನೆ ಹುಡುಗನ ದೊಡ್ಡ ಗುಣ ಒಂದೊಂದಾಗಿ ಹೊರಬರಲಾರಂಭಿಸಿದೆ. ಅವರನ್ನು ನೆನೆದು ಪುಟ್ಟ ಬಾಲಕಿಯೊಬ್ಬಳ್ಳು ನಿತ್ಯ ಕಣ್ಣೀರು ಹಾಕ್ತಿದ್ದಾಳೆ. ಪುನೀತ್ ಕೊಟ್ಟ ಪರ್ಸ್, ಆಟೋಗ್ರಾಫ್ (purse and autograph) ನೋಡುತ್ತಾ ಸ್ಮರಣೆ ಮಾಡಿಕೊಳ್ತಿದಾಳೆ. ಎರಡು ತಿಂಗಳ ಹಿಂದೆಯಷ್ಟೇ ಅಪ್ಪಿಕೊಂಡು ಪಪ್ಪಿ ಕೊಟ್ಟಿದ್ದ ಅಪ್ಪು ಇಲ್ಲವೆಂಬ ಸುದ್ದಿ ತಿಳಿದ ಆಘಾತದಲ್ಲಿ ಕಣ್ಣೀರು ಹಾಕ್ತಿದ್ದಾಳೆ. ಶ್ರೀಶಾ (shrisha) ಎಂಬ ಆರು ವರ್ಷದ ಬಾಲಕಿ ಕುಂದಗೋಳ ನಿವಾಸಿ. ಈಶ್ವರ್ ಮುದಗಣ್ಣನವರ ಹಾಗೂ ಕೀರ್ತಿ ದಂಪತಿ ಪುತ್ರಿ ಶ್ರೀಶಾ ಅಪ್ಪಟ ರಾಜಕುಮಾರ್ ಅಭಿಮಾನಿ.
ಅಣ್ಣಾವ್ರ ಎಲ್ಲಾ ಸಿನಿಮಾಗಳ ಹೆಸರು ನಾಲಿಗೆ ತುದಿಯಲ್ಲಿ
ಡಾ.ರಾಜಕುಮಾರ್ ರ 206 ಚಿತ್ರಗಳ ಹೆಸರನ್ನು ಪಟ ಪಟನೇ ಹೇಳೆ ಚಾಣಾಕ್ಷತೆ ಈ ಬಾಲಕಿಯದ್ದು. ಅದೇ ಕಾರಣಕ್ಕೇ ಪುನೀತ್ ರಾಜಕುಮಾರ್ ಗಮನ ಸೆಳೆದಿದ್ದಳು. ಪುನೀತ್ ರಾಜಕುಮಾರರ ಆಪ್ತರು ಪುಟಾಣಿಯ ವಿಷಯ ತಿಳಿಸಿದಾಗ ಶ್ರೀಶಾ ಳನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದರು. ಇದೇ ವರ್ಷ ಆಗಷ್ಟ್ 20 ರಂದು ತಮ್ಮ ಕಛೇರಿಗೆ ಬಾಲಕಿಯನ್ನು ಕರೆಯಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಪ್ರೀತಿಯಿಂದ ಮಾತನಾಡಿಸಿದ್ದರು. ಶ್ರೀಶಾ ಳ ಬುದ್ಧಿ ಸಾಮರ್ಥ್ಯ ಕಂಡು ಪುನೀತ್ ಬೆರಗಾಗಿದ್ದರು.

ಪುಟಾಣಿಗೆ ಅಪ್ಪುನ ಪ್ರೀತಿಯ ಪಪ್ಪಿ
ತಮ್ಮ ತಂದೆಯ ಚಲನಚಿತ್ರಗಳ ಹೆಸರನ್ನು ಪುಟಾಣಿ ಬಾಯಲ್ಲಿ ಕೇಳಿಸಿಕೊಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು ಪುನೀತ್. ಬಾಲಕಿಗೆ ಒಂದು ಪರ್ಸ್, ಚಾಕೊಲೆಟ್ ಬಾಕ್ಸ್ ಗಿಫ್ಟ್ ಕೊಟ್ಟಿದ್ದಲ್ಲದೆ ಯುವರತ್ನ ಪ್ಯಾಡ್ ನಲ್ಲಿ ಆಟೋಗ್ರಾಫ್ ಕೊಟ್ಟು ಕಳಿಸಿದ್ದರು. ಅಪ್ಪಿಕೊಂಡು ಪಪ್ಪಿ ಕೊಟ್ಟು, ಮುಂದಿನ ದಿನಗಳಲ್ಲಿ ತಮ್ಮ ಚಿತ್ರದಲ್ಲಿ ಅಭಿನಯಕ್ಕೆ ಅವಕಾಶ ಮಾಡಿಕೊಡೋ ಭರವಸೆಯನ್ನೂ ನೀಡಿದ್ದರು. ಚಿಕ್ಕ ವಯಸ್ಸಿಗೇ ಡಿಸಿ ಆಗ್ತೀಯಾ ನೀನು ಎಂದಿದ್ದರು. ಇಷ್ಟೆಲ್ಲಾ ಪ್ರೀತ್ಯಾದರಗಳನ್ನು ತೋರಿದ್ದ ಅಪ್ಪು ನಮ್ಮನ್ನಗಲಿದ್ದಾನೆಂದು ಪುಟ್ಟ ಬಾಲಕಿ ಕಣ್ಣೀರು ಹಾಕ್ತಿದ್ದಾಳೆ. ಅಪ್ಪು ಇಲ್ಲದೇ ಇರೋದಕ್ಕೆ ತುಂಬಾ ಬೇಜಾರಾಗ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾಳೆ ಶ್ರೀಶಾ.