ಬೆಳಗಾವಿ, ನ. 8: ಉತ್ತರ ಕರ್ನಾಟಕದ ಜನರ ಬಹು ದಿನಗಳ ಬೇಡಿಕೆಯನ್ನ ರಾಜ್ಯ ಸರ್ಕಾರ ಇಂದು ಈಡೇರಿಸಿದೆ. ಬೆಳಗಾವಿ ವಿಭಾಗವನ್ನು ಮುಂಬಯಿ ಕರ್ನಾಟಕ (Mumbai Karnataka) ಎಂದು ಕರೆಯಲಾಗುತ್ತಿತ್ತು. ಇದು ದಾಸ್ಯದ ಸಂಕೇತವಾಗಿದ್ದು ಬದಲಾವಣೆ ಮಾಡಿ ಕಿತ್ತೂರು ಕರ್ನಾಟಕ (Kittur Karnataka) ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಕಳೆದ ಅನೇಕ ವರ್ಷಗಳಿಂದ ಈ ಬಗ್ಗೆ ಸರ್ಕಾರ ಗಮನವನ್ನು ಕನ್ನಡಪರ ಹೋರಾಟಗಾರರು ಸೆಳೆದಿದ್ದರು. ಆದರೆ ಈ ವರೆಗೆ ಸರ್ಕಾರಗಳು ಗಮನ ಹರಿಸಿರಲಿಲ್ಲ. ಆದರೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಮಾತು ಕೊಟ್ಟ 15 ದಿನದಲ್ಲಿ ಬೇಡಿಕೆ ಈಡೇರಿಸಿದ್ದಾರೆ. ಇದು ಗಡಿ ಭಾಗದ ಜನರ ಸಂತಸಕ್ಕೆ ಕಾರಣವಾಗಿದ್ದು ಇಂದು ಎಲ್ಲಾ ಕಡೆಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಕಿತ್ತೂರು ರಾಣಿ ಚನ್ನಮ್ಮ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಶೀಘ್ರದಲ್ಲೇ ಮುಂಬಯಿ ಕರ್ನಾಟಕ ಹೆಸರನ್ನ ಬದಲಾವಣೆ ಮಾಡಿ ಕಿತ್ತೂರು ಕರ್ನಾಟಕ ಎಂದು ಮರು ನಾಮಕರಣ ಮಾಡುವ ಭರವಸೆ ನೀಡಿದ್ದರು. ಆ ಮಾತುಕೊಟ್ಟ ನಂತರ ಕೇವಲ 15 ದಿನದಲ್ಲಿ ಈ ಬಗ್ಗೆ ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇಂದು ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಹೊರ ಬಿದ್ದಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಮುಂಬಯಿ ಕರ್ನಾಟಕ ಇದು ದಾಸ್ಯದ ಸಂಕೇತ ಇದನ್ನು ಬದಲಾವಣೆ ಮಾಡಬೇಕು ಎಂದು ವಿದ್ವಾಂಸ ಚಿದಾನಂದ ಮೂರ್ತಿ ಮೊದಲು ಧ್ವನಿ ಎತ್ತಿದ್ದರು. ನಂತರ ಈ ಬಗ್ಗೆ ಕನ್ನಡ ಹೋರಾಟಗಾರು ಅನೇಕ ಪ್ರತಿಭಟನೆ ಸಹ ಮಾಡಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಹೋರಾಟಗಾರರ ಬೇಡಿಕೆ ಈಡೇರಿಸಿದ್ದಾರೆ. ಈ ಹಿನ್ನೆಲೆ ಸಂಭ್ರಮಾಚರಣೆ ಎಲ್ಲಾ ಕಡೆಗಳಲ್ಲಿ ನಡೆಯುತ್ತಿದೆ. ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಶಿವರಾಮೇಗೌಡ ಬಣ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಘೋಷಣೆ ಕೂಗಿದರು. ಕರವೇ ಮುಖಂಡ ಮಹಾಂತೇಶ ರಣಗಟ್ಟಿಮಠ, ವಾಜೀದ್ ಸೇರಿ ಅನೇಕರು ಇದ್ದರು.
ನಂತರ ಕನ್ನಡ ಪರ ಸಂಘಟನೆಗಳು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಅಶೋಕ ಚಂದರಗಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಸುರೇಶ ತಳವಾರ, ಶಂಕರ ಬಾಗೇವಾಡಿ ಹಾಗೂ ವೀರೇಂದ್ರ ಸೇರಿ ಅನೇಕ ಕಾರ್ಯಕರ್ತರು ಹಾಜರಿದ್ದರು.