Goa Election 2022: ಗೋವಾದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಇನ್ನೂ ಒಂದು ವರ್ಷವಿದ್ದರೂ, ಅದರ ಕಾವು ಈಗಾಗಲೇ ತಾರಕಕ್ಕೇರುತ್ತಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamatha Banerjee) ಗೋವಾಗೆ ಭೇಟಿ ನೀಡಿದ್ದರು. ಅಲ್ಲದೆ, ಅದಕ್ಕೂ ಮುನ್ನ ಗೋವಾ ರಾಜ್ಯದಲ್ಲಿ ಟಿಎಂಸಿ (TMC) ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಶ್ಚಿಮ ಬಂಗಾಳದಂತೆ (West Bengal) ಗೋವಾವನ್ನು ಮಾಡಲು ನಮಗೆ ಅವಕಾಶ ಕೊಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಈ ಹಿನ್ನೆಲೆ ಬಿಜೆಪಿ ಯುವ ನಾಯಕ ಹಾಗೂ ಸಂಸದ ತೇಜಸ್ವಿ (BJP MP Tejasvi Surya) ಟಿಎಂಸಿಗೆ ತಿರುಗೇಟು ನೀಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಮಮತಾ ‘ಬೇಗಂ’ ಎಂದು ಉಲ್ಲೇಖಿಸಿದ ಬಿಜೆಪಿ ಸಂಸದ ಮತ್ತು ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ, ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿಯನ್ನು ಋಷಿ ಪರಶುರಾಮ ಮತ್ತು ಶಿವಾಜಿ ಮಹಾರಾಜರ ಭೂಮಿಗೆ ಕಾಲಿಡಲು ಬಿಡಬಾರದು ಎಂದು ಶನಿವಾರ ಹೇಳಿದ್ದಾರೆ.
ಪೂರ್ಣ ಬಹುಮತವೇ ಗುರಿ
“ನಮಗೆ ಗೋವಾದಲ್ಲಿ ಪೂರ್ಣ ಬಹುಮತದ ಸರ್ಕಾರ ಬೇಕು, 2022 ಗೋವಾದಲ್ಲಿ ರಾಜಕೀಯದ ಹೊಸ ಯುಗಕ್ಕೆ ನಾಂದಿ ಹಾಡಲಿದೆ, ಅದು ಪೂರ್ಣ ಬಹುಮತದ ಸರ್ಕಾರದ ಮೂಲಕ. ದೇಶವು ಸಾಕಷ್ಟು ಅಪಾಯದಲ್ಲಿರುವ ಕಾರಣ ಹಾಗೂ ಯುವ ನಾಯಕತ್ವ ಬಯಸುತ್ತಿರುವ ಕಾರಣ ನಾವು ಇದನ್ನು ಮಾಡಬೇಕಾಗಿದೆ’’ ಎಂದು ತೇಜಸ್ವಿ ಸೂರ್ಯ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಹೇಳಿದರು.
ಆಕೆ ಮಮತಾ ಬೇಗಂ
ಅಲ್ಲದೆ, ಮಮತಾ ಬೇಗಂ ಅವರನ್ನು ಪರಶುರಾಮರ ಮತ್ತು ಶಿವಾಜಿ ಮಹಾರಾಜರ ಭೂಮಿಗೆ ಬರಲು ನಾವು ಬಿಡುವ ಹಾಗಿಲ್ಲ. ಈ ಹಿನ್ನೆಲೆ ನಾವು ಇದನ್ನು ಮಾಡಬೇಕಿದೆ ಎಂದೂ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಕರಾವಳಿ ರಾಜ್ಯದಲ್ಲಿ 2022ರ ರಾಜ್ಯ ವಿಧಾನಸಭಾ ಚುನಾವಣೆಗೆ ಟಿಎಂಸಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ತೇಜಸ್ವಿ ಸೂರ್ಯ ಈ ರೀತಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.