ಹಾವೇರಿ/ವಿಜಯಪುರ: ಇಂದು ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರದ (Sindagi And Hangal Byelection) ಉಪಚುನಾವಣೆಯ ಮತ ಎಣಿಕೆಗೆ ಸಿದ್ಧತೆ ನಡೆದಿದೆ. ಹಾವೇರಿ ತಾಲೂಕಿನ ದೇವಗಿರಿ ಗ್ರಾಮದಲ್ಲಿರುವ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಪ್ರಾರಂಭಗೊಳ್ಳಲಿದೆ. ಮತ ಎಣಿಕೆಗೆ ಎರಡು ಕೊಠಡಿಗಳಲ್ಲಿ ಹದಿನಾಲ್ಕು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ ಗೆ ಮೂವರು ಸಿಬ್ಬಂದಿ ನೇಮಕ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 250 ಪೊಲೀಸರನ್ನು ನಿಯೋಜಿಸಲಾಗಿದೆ. ಒಟ್ಟು 19 ಸುತ್ತಗಳಲ್ಲಿ ಮತಎಣಿಕೆ ನಡೆಯಲಿದೆ.

ಸಿಂದಗಿ ವಿಧಾನಸಭಾ ಉಪಚುನಾವಣೆ ಮತ ಎಣಿಕೆಗೆ ಸಿದ್ಧತೆ
ವಿಜಯಪುರ ನಗರದ ಸೈನಿಕ ಶಾಲೆಯ ಆವರಣದ ಒಡೆಯರ್ ಹೌಸ್ ನಲ್ಲಿ ಮತ ಎಣಿಕೆ ನಡೆಯಲಿದೆ. ಎರಡು ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಒಟ್ಟು 14 ಟೇಬಲ್ ಗಳು ಮಾಡಲಾಗಿದೆ. ಪ್ರತಿ ಟೇಬಲ್ ಗೆ ಒಬ್ಬ ಮೈಕ್ರೋ ಅಬ್ಸರ್ವರ್ ಒಬ್ಬ ಮತಎಣಿಕೆ ಮೇಲ್ವಿಚಾರಕ, ಒಬ್ಬ ಮತ ಎಣಿಕೆ ಸಹಾಯಕರು ಸೇರಿದಂತೆ ಒಟ್ಟು 60 ಸಿಬ್ಬಂದಿಯನ್ನು ನೇಮಿಸಲಾಗಿದೆ. ಒಟ್ಟು 22 ಸುತ್ತುಗಳಲ್ಲಿ ಮತ ಎಣಿಕೆ ಆಗಲಿದೆ.
ಸಿಂದಗಿಯಲ್ಲಿ ಶೇ.69.47ರಷ್ಟು ಮತದಾನ
ಮತ ಎಣಿಕೆ ಕೇಂದ್ರ ಒಳಗೆ ಮತ್ತು ಹೊರಗೆ ಅವಶ್ಯವಿರುವ ಭದ್ರತಾ ಮತ್ತು ಕಾನೂನು ಸುವ್ಯವಸ್ಥೆಗೆ 4 ಡಿವೈಎಸ್ಪಿ, 5 ಸಿಪಿಐ, 23 ಪಿಎಸ್ಐ, 25 ಎಎಸ್ಐ 282 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಒಟ್ಟು 69.47% ರಷ್ಟು ಮತದಾನವಾಗಿದೆ.