RIP Puneeth Rajkumar: ಕನ್ನಡಿಗರ ಪಾಲಿನ ಪವರ್ ಸ್ಟಾರ್ (Power Star) ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎನ್ನುವುದನ್ನು ಇನ್ನೂ ಜನರಿಗೆ ಅರಗಿಸಿಕೊಳ್ಳಲು ಸಾಧ್ಯವೇ ಆಗ್ತಿಲ್ಲ. ಉಸಿರು ಚೆಲ್ಲಿದ ಮೇಲೂ ಅಪ್ಪು ಮತ್ತಷ್ಟು ಬದುಕಿಗೆ ಬೆಳಕು (Lighting Lives) ತುಂಬುತ್ತಲೇ ಇದ್ದಾರೆ. ಅವರ ತಂದೆ ಮೇರುನಟ ಡಾ ರಾಜ್ಕುಮಾರ್ (Dr Rajkumar) ನಡೆದುಬಂದ ದಾರಿಯಲ್ಲೇ ಸಾಗಿರುವ ಪುನೀತ್ ಅಷ್ಟೊಂದು ಆರೋಗ್ಯವಾಗಿದ್ದವರು ಅದ್ಹೇಗೆ ಧಿಡೀರನೆ ಎದ್ದು ಹೊರಟುಬಿಟ್ಟರು ಎನ್ನುವುದು ಇನ್ನೂ ತಿಳಿಯುತ್ತಲೇ ಇಲ್ಲ. ತಮ್ಮ ಬದುಕಿನ ಮೂಲಕ ಪಾಠವಾಗಿದ್ದ ಪುನೀತ್ ಸಾವಿನಲ್ಲೂ ಅದ್ಭುತ ಸಂದೇಶ (A Noble Message) ನೀಡಿಯೇ ಹೋಗಿದ್ದಾರೆ..ಥೇಟ್ ಅವರ ತಂದೆ ಮೇರುನಟ ಡಾ ರಾಜ್ಕುಮಾರ್ ರಂತೆ.
ನೇತ್ರದಾನದ ಕುರಿತು ಅರಿತ ಡಾ ರಾಜ್
ಅದು 1994.. ಅಂಗಾಂಗ ದಾನಗಳ ಬಗ್ಗೆ ಜನರಿಗೆ ಇನ್ನೂ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ಆದ್ರೆ ಬೇರೆಲ್ಲಾ ಅಂಗಗಳಿಗಿಂತ ನೇತ್ರದಾನ ಮತ್ತು ಕಣ್ಣಿನ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿತ್ತು. ಡಾ ರಾಜ್ಕುಮಾರ್ ಗೆ ಸಾವಿನ ನಂತರ ನೇತ್ರದಾನ ಮಾಡಬಹುದು, ಅದರಿಂದ ಇಬ್ಬರು ದೃಷ್ಟಿ ಚೇತನರಿಗೆ ದೃಷ್ಟಿ ಸಿಗುವಂತೆ ಮಾಡಲು ಸಾಧ್ಯವಿದೆ ಎಂದು ತಿಳಿಯಿತು.
ತಿಳಿದದ್ದೇ ತಡ, ತಾವೂ ಮುಂದೆ ಹೋಗಿ ತಮ್ಮ ಕಣ್ಣುಗಳನ್ನು ದಾನ ಮಾಡಲು ಪತ್ರಗಳಿಗೆ ಸಹಿ ಹಾಕಿಬಿಟ್ಟರು. ಅಷ್ಟೇ ಅಲ್ಲ, ನಾನು ಮಾತ್ರ ಅಲ್ಲ, ನನ್ನ ಕುಟುಂಬದ ಎಲ್ಲರೂ ಸಾವಿನ ನಂತರ ತಂತಮ್ಮ ಕಣ್ಣುಗಳನ್ನು ದಾನ ಮಾಡುತ್ತೇವೆ ಎಂದು ಹೇಳಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ ಭುಜಂಗ ಶೆಟ್ಟಿ.