ಸ್ಕ್ವಿಡ್ ಗೇಮ್ ಇತ್ತೀಚಿನ ಸೂಪರ್ ಹಿಟ್ ಸರಣಿಯಾಗಿದೆ ಮತ್ತು ಪ್ರಪಂಚದಾದ್ಯಂತದ ಅನೇಕರು ಇದರ ವೀಕ್ಷಣೆಯಲ್ಲಿ ಮಗ್ನರಾಗಿದ್ದಾರೆ. ಅಂದಹಾಗೆಯೇ ಸುಮಾರು 21 ಮಿಲಿಯನ್ ಡಾಲರ್ ವೆಚ್ಚದ ಪ್ರದರ್ಶನ ಕಂಡಿರುವ ಈ ಗೇಮ್ 891.1 ಮಿಲಿಯನ್ ಡಾಲರ್ ಮೌಲ್ಯವನ್ನು ಗಳಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಸ್ಕ್ವಿಡ್ ಗೇಮ್ ಸಿರೀಸ್ ಅತಿಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿರುವುದನ್ನು ಗಮನಹರಿಸಿ ಹ್ಯಾಕರ್ಗಳು ಗಮನಹರಿಸಿ ಕೈಚಳಕ ತೊಳಿಸಲು ಮುಂದಾಗಿದ್ದಾರೆ. ದುರುದ್ದೇಶಪೂರಿತ ಮಾಲ್ವೇರ್ ಮೂಲಕ ವೀಕ್ಷಕರನ್ನು ಸಂಕಷ್ಟದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ. ಮಾಲ್ವೇರ್ ಹರಡಲು ಬಳಸಲಾಗುತ್ತಿದ್ದ ಆ್ಯಪ್ ಅನ್ನು ಭದ್ರತಾ ಸಂಸ್ಥೆಯು ಪ್ಲೇ ಸ್ಟೋರ್ನಲ್ಲಿ ಫ್ಲ್ಯಾಗ್ ಮಾಡಿದ ನಂತರ ಪ್ಲೇ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಮತ್ತು ಬಳಕೆದಾರರು ತಮ್ಮ ಸಾಧನಗಳಿಂದ ಆ್ಯಪ್ ಅನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದೆ.
ಜನಪ್ರಿಯ ನೆಟ್ಫ್ಲಿಕ್ಸ್ ಸರಣಿ ಸ್ಕ್ವಿಡ್ ಗೇಮ್ನ ವೀಕ್ಷಕರನ್ನು ಉದ್ದೇಶಿಸಿ ಸಿದ್ಧಪಡಿಸಿರುವ ಮಾಲ್ವೇರ್ ಅನ್ನು ಇಎಸ್ಇಟಿ ಸಂಶೋಧಕ ಲುಕಾಸ್ ಸ್ಟೆಫ್ಯಾಂಕೊ ಗುರುತಿಸಿದ್ದಾರೆ, ಅವರು ಭದ್ರತಾ ಸಂಸ್ಥೆಯಲ್ಲಿ ಮಾಲ್ವೇರ್ ಅಧ್ಯಯನ ಮಾಡುತ್ತಾರೆ. ‘ಸ್ಕ್ವಿಡ್ ಗೇಮ್ ವಾಲ್ಪೇಪರ್ 4K HD’ ಎಂದು ಕರೆಯಲ್ಪಡುವ ಅಪ್ಲಿಕೇಶನ್ ಕುಖ್ಯಾತ ಜೋಕರ್ ಮಾಲ್ವೇರ್ ಅನ್ನು ಹರಡಲು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.
‘‘ನಾವು ಈ ಮೊದಲು ಜೋಕರ್ ಮಾಲ್ವೇರ್ ಅನ್ನು ಕವರ್ ಮಾಡಿದ್ದೇವೆ, ಪ್ಲೇ ಸ್ಟೋರ್ನಲ್ಲಿ ಇಂತಹ ಅಪ್ಲಿಕೇಶನ್ ಸಿಗುವುದು ಇದೇ ಮೊದಲೇನಲ್ಲ, ಆದರೆ ಹೊಸ ಹಿಟ್ ಸರಣಿಯ ವೀಕ್ಷಕರು ಗುರಿಯಾಗಿಸಿಕೊಂಡು ಮಾಲ್ವೇರ್ ಬಳಸುತ್ತಿರುವುದು ಇದೇ ಮೊದಲು’’ ಎಂದು ಲುಕಾಸ್ ಸ್ಟೆಫ್ಯಾಂಕೊ ಹೇಳಿದ್ದಾರೆ.