ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಲ್ಲಿ (Bengaluru) ಶ್ವಾನ ಪ್ರಿಯರಿಗೇನು ಕಮ್ಮಿ ಇಲ್ಲ. ಮನೆಗೊಂದು ಶ್ವಾನ ಇದ್ದರೇನೆ ಬದುಕು ಅರ್ಥಪೂರ್ಣ ಎನ್ನುವವರಿದ್ದಾರೆ. ಅಂಥವರಿಗೆ ಬಿಬಿಎಂಪಿ (BBMP) ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮನೆಯಲ್ಲಿ ನಾಯಿ ಸಾಕ್ಬೇಕು ಎಂದರೆ ಪಾಲಿಕೆಯಿಂದ ಪರವಾನಿಗೆ (Permission) ಪಡೆಯಬೇಕು. ಈ ರೀತಿಯ ಒಂದು ಪಾಲಿಸಿಗೆ ಅನುಮತಿ ಕೊಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಶ್ವಾನ ಪ್ರಿಯರೇ ಸಜ್ಜಾಗಿ, ಇನ್ಮುಂದೆ ಬೆಂಗಳೂರಿಗರು ನಾಯಿ ಸಾಕಬೇಕು (Pet Dogs)ಎಂದರೆ ಪಾಲಿಕೆಯಿಂದ ಪರವಾನಿಗೆ ಪಡೆಯುವ ಅಗತ್ಯವಿದೆ. ಈ ಬಗ್ಗೆ ಒಂದು ಡ್ರಾಫ್ಟ್ ತಯಾರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರದ ಅನುಮೋದನೆಗಾಗಿ ಪಾಲಿಕೆ ಈಗ ಕಾಯುತ್ತಿದೆ. ಅಷ್ಟಕ್ಕೂ ಏನಿದು ಪಾಲಿಕೆಯ ಹೊಸ ನಿಯಮ ಎನ್ನುವುದೇ ಕುತೂಹಲಕಾರಿ ಸಂಗತಿ.
ಅನೇಕ ಜನ ಆರಂಭದಲ್ಲಿ ಬಹಳ ಮುತವರ್ಜಿ ವಹಿಸಿ ಶ್ವಾನ ಖರೀದಿಗೆ ಮುಂದಾಗುತ್ತಾರೆ. ಬರಬರುತ್ತಾ, ಅದನ್ನು ನಿರ್ವಹಣೆ ಹಾಗೂ ಅದನ್ನು ನಿಭಾಯಿಸುವದೇ ಜನರಿಗೆ ಕಷ್ಟದ ಕೆಲಸ. ಹೀಗಾಗಿ ಅದನ್ನು ಬೇಕಾಬಿಟ್ಟಿ ಬೀದಿಗೆ ಬಿಟ್ಟು (Abandoning Dogs) ಬಿಡುತ್ತಾರೆ. ಈಗಾಗಲೇ ನಾಯಿ ದಾಳಿಗೆ ಮಕ್ಕಳು ಬಲಿ, ಮಹಿಳೆಯರ ಮೇಲೆ ನಾಯಿ (Dog Attack) ದಾಳಿ ಎಂಬಿತ್ಯಾದಿ ಸುದ್ದಿಗಳು ಬೆಂಗಳೂರಿನಲ್ಲಿ ಕಾಮನ್. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಈಗ ಮುಂದಾಗಿದೆ.
ಎರಡು ರೀತಿಯ ಪರವಾನಿಗೆ ನೀಡಲು ನಿರ್ಧರಿಸಿರುವ ಬಿಬಿಎಂಪಿ
ಸದ್ಯ ಬಿಬಿಎಂಪಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಎರಡು ರೀತಿಯ ಲೈಸನ್ಸ್ ನೀಡಲು ನಿರ್ಧರಿಸಿದೆ. ಪೆಟ್ ಡಾಗ್ ಲೈಸೆನ್ಸ್ ಹಾಗೂ ಡಾಗ್ ಬ್ರೀಡ್ ಲೈಸೆನ್ಸ್, ಎಂಬ ಎರಡು ಬಗೆಯ ಪರವಾನಿಗೆ ಪಾಲಿಕೆ ನೀಡಲು ಚಿಂತಿಸಿದೆ. ಎಂದರೆ ಮನೆಯಲ್ಲೇ ಶ್ವಾನ ಸಾಕುವುದಾರೆ ಪೆಟ್ ಡಾಗ್ ಲೈಸೆನ್ಸ್ ಹಾಗೂ ನಾಯಿ ಸಾಕಿ ಮರಿಮಾಡಿಸಿ ಮಾರಾಟ ಮಾಡುವುದಾದರೆ ಡಾಗ್ ಬ್ರೀಡ್ ಲೈಸೆನ್ಸ್ ಜನರು ಪಡೆಯ ಬೇಕಿದೆ. ಆದರೆ ಪೆಟ್ ಡಾಗ್ ಲೈಸೆನ್ಸ್ ಒಮ್ಮೆ ಪಡೆದರೆ ಸಾಕು. ಆದರೆ ಡಾಗ್ ಬ್ರೀಡ್ ಲೈಸೆನ್ ಅನ್ನು ವರ್ಷಕ್ಕೊಮ್ಮೆ ನವೀಕರಣ ಮಾಡಿಸುವ ಅಗತ್ಯವಿದೆ. ಅಕಸ್ಮಾತ್ ಈ ಎರಡರಲ್ಲಿ ಒಂದು ಪರವಾನಿಗೆ ಪಡೆಯದ ಜನರಿಗೆ ಸಾಕಲು ಅನುಮತಿ ಇರುವುದಿಲ್ಲ. ಮುಂದಿನ 15 ದಿನಗಳಲ್ಲಿ ಈ ಸಂಬಂಧ ಬಿಬಿಎಂಪಿ ಅಧಿಕೃತ ಆದೇಶ ಹೊರಡಿಸಲಿದೆ.