ಕೊಡಗು: ಕೊಡಗು ಜಿಲ್ಲೆ ಪ್ರವಾಸಿ ತಾಣಗಳ (Kodagu District Tourist Spot) ತವರೂರು. ಈ ಪ್ರವಾಸಿತಾಣಗಳಲ್ಲಿ ಒಂದಾದ ಕಾವೇರಿ ನಿಸರ್ಗಧಾಮದಲ್ಲಿ (Cauvery Nisargadhama) ಹೊಸದಾಗಿ ನಿರ್ಮಾಣಗೊಂಡಿರುವ ಪಕ್ಷಿಧಾಮ (Bird Sanctuary) ಮತ್ತು ಸಾಹಸ ಕ್ರೀಡೆಗಳು (Adventure Games) ನಿಸರ್ಗಧಾಮವನ್ನು ಮತ್ತಷ್ಟು ಆಕರ್ಷಣೆಗೊಳಿಸಿವೆ.
ಹೌದು ನೂರಾರು ವರ್ಷಗಳಿಂದ ಬೆಳೆದಿದ್ದ ಬಿದಿರು ಕಳೆದ 10 ವರ್ಷಗಳ ಹಿಂದೆ ಕಟ್ಟೆರೋಗ ಬಂದು ಬುಡಸಮೇತ ಒಣಗಿ ಹೋಗಿತ್ತು. ಆದರೆ ಕಟ್ಟೆರೋಗ ಬಂದು ಒಣಗಿಹೋದ ವರ್ಷದಲ್ಲಿ ಹೊಸದಾಗಿ ಬೆಳೆದ ಬಿದಿರು ಈಗ ಇಡೀ ನಿಸರ್ಗಧಾಮವನ್ನು ಆವರಿಸಿ ಹಚ್ಚಹಸಿರಿನ ದಟ್ಟಾರಣ್ಯದಂತೆ ಮಾಡಿದೆ. ಮತ್ತೊಂದೆಡೆ ಅರಣ್ಯ ಇಲಾಖೆ ಖಾಸಗಿಯವರ ಸಹಭಾಗಿತ್ವದಲ್ಲಿ ಆರಂಭಿಸಿರುವ ಪಕ್ಷಿ ಕೇಂದ್ರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೊಸದಾಗಿ ಪಕ್ಷಿ ಕೇಂದ್ರವನ್ನು ಮಾಡಲಾಗಿದ್ದು ವಿದೇಶಿ ತಳಿಗಳ ನೂರಾರು ಪಕ್ಷಿಗಳ ಕಲರವ ಪ್ರವಾಸಿಗರ ಮೈಮನಗಳಿಗೆ ಮುದ ನೀಡುತ್ತಿದೆ. ಬೇರೆಡೆ ಪಕ್ಷಿಧಾಮಗಳಲ್ಲಿ ನೀವು ದೂರದಿಂದ ಪಕ್ಷಿಗಳನ್ನು ನೋಡಿದರೆ, ನಿಸರ್ಗಧಾಮದಲ್ಲಿ ನೀವು ನೇರವಾಗಿ ಪಕ್ಷಗಳಿಗೆ ಕಾಳುಗಳನ್ನು ನೀಡಬಹುದು. ನೀವು ಪಕ್ಷಿ ಕೇಂದ್ರಗಳ ಒಳಗೆ ಹೋಗುತ್ತಿದ್ದಂತೆ ನಿಮ್ಮ ಮೈಮೇಲೆ ಬಂದು ಕುಳಿತುಕೊಳ್ಳುವ ಕಲರ್ ಫುಲ್ಲಾದ ಮುದ್ದಾದ ಗಿಳಿಗಳು ಹಾರಿ ಬಂದು ನಿಮ್ಮ ಮೈಮೇಲೆಲ್ಲಾ ಕುಳಿತುಕೊಂಡು ಕಾಳುಗಳಿಗಾಗಿ ಹಾತೊರೆಯುತ್ತವೆ. ಆ ಕ್ಷಣದಲ್ಲಿ ಪ್ರವಾಸಿಗರಿಗೆ ಆಗುವ ಸಂತಸ ಅಷ್ಟಿಷ್ಟಲ್ಲ.