‘ಕಾಗೆಮೊಟ್ಟೆ’ ಮೇಲೆ ಗರಿಗೆದರಿದ ನಿರೀಕ್ಷೆ: ಅ.1ಕ್ಕೆ ಚಿತ್ರ ತೆರೆಗೆ
ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅಭಿನಯಿಸಿರುವ “ಕಾಗೆ ಮೊಟ್ಟೆ’ ಚಿತ್ರ ಇದೇ ಶುಕ್ರವಾರ (ಅ. 1)ಕ್ಕೆ ತೆರೆಗೆ ಬರುತ್ತಿದೆ. ಕಳೆದ ಕೆಲದಿನಗಳಿಂದ ಚಿತ್ರದ ಪ್ರಚಾರ ಕಾರ್ಯದಲ್ಲಿರುವ ಚಿತ್ರತಂಡ ಇತ್ತೀಚೆಗಷ್ಟೇ “ಕಾಗೆ ಮೊಟ್ಟೆ’ ಟ್ರೇಲರ್ ಬಿಡುಗಡೆ ಮಾಡಿದ್ದು, ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡು ಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೂವರು ಹಳ್ಳಿ ಯುವಕರು ಬೆಂಗಳೂರಿಗೆ ಬಂದು ಇಲ್ಲಿನ ಭೂಗತ ಲೋಕವನ್ನು ಪ್ರವೇಶಿಸಿ ಅಲ್ಲಿನ ಭೂಗತ ಪಾತಕಿಗಳ ಸುತ್ತ ಸೆಣೆಸಾಡುವ ಘಟನೆಗಳ ಸುತ್ತ “ಕಾಗೆ ಮೊಟ್ಟೆ’ ಚಿತ್ರ ಸಾಗುತ್ತದೆ. ಚಂದ್ರಹಾಸ “ಕಾಗೆ ಮೊಟ್ಟೆ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಗುರುರಾಜ್ ಜಗ್ಗೇಶ್ ಅವರೊಂದಿಗೆ ಹೇಮಂತ್ ರೆಡ್ಡಿ ಮತ್ತು ಮಾದೇಶ್ ಸಹ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ತನುಜಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸೌಜನ್ಯಾ, ಶರತ್ ಲೋಹಿತಾಶ್ವ, ಪೊನ್ನಂ ಬಲಂ, ರಾಜ್ ಬಹದ್ದೂರ್ ಮೊದಲಾದವರು “ಕಾಗೆ ಮೊಟ್ಟೆ’ಯ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಡಾ. ವಿ ನಾಗೇಂದ್ರ ಪ್ರಸಾದ್ ಸಂಭಾಷಣೆ ಬರೆದಿದ್ದು, ಕವಿರಾಜ್ ಹಾಗೂ ಜಯಂತ್ ಕಾಯ್ಕಿಣಿ ಹಾಡುಗಳನ್ನು ಬರೆದಿದ್ದಾರೆ. ಶ್ರೀವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪಿ.ಎಲ್. ರವಿ ಛಾಯಾಗ್ರಹಣವಿದೆ. ಕೊಳ್ಳೇಗಾಲ, ಚಾಮ ರಾಜನಗರ ಅಲ್ಲದೆ ಬೆಂಗಳೂರಿನ ಹಲವಾರು ಸ್ಲಂಗಳಲ್ಲಿ ಚಿತ್ರದ ಶೂಟಿಂಗ್ ನಡೆಸಲಾಗಿದೆ.
ಕೋವಿಡ್ ಎರಡನೇ ಲಾಕ್‌ಡೌನ್‌ಗೂ ಮೊದಲೇ “ಕಾಗೆ ಮೊಟ್ಟೆ’ ಸಿನಿಮಾದ ಎಲ್ಲ ಕೆಲಸಗಳೂ ಮುಗಿದಿದ್ದು, ಸಿನಿಮಾ ರಿಲೀಸಿಗೆ ಸಿದ್ಧವಾಗಿತ್ತು. ಈಗ ಕೊರೊನಾ ಎರಡನೇ ಅಲೆ ಕಡಿಮೆ ಆಗುತ್ತಿದ್ದರಿಂದ, ಇದೇ ಅಕ್ಟೋಬರ್ ಮೊದಲವಾರ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಚನೆ ಹಾಕಿಕೊಂಡಿದೆ.