ಸಿನಿಮಾ

ಕನ್ನಡದಲ್ಲಿಲ್ಲ ಜೇಮ್ಸ್ ಬಾಂಡ್: ಥಿಯೇಟರ್ ವಿರುದ್ಧ ಆಕ್ರೋಶ

ಜಗತ್ತಿನ ಅತ್ಯಂತ ಯಶಸ್ವಿ ಸಿನಿಮಾ ಜೇಮ್ಸ್ ಬಾಂಡ್ ಸರಣಿಯ ‘ನೋ ಟೈಂ ಟು ಡೈ’ ವಿಶ್ವದಾದ್ಯಂತ ತೆರೆಕಂಡಿದೆ. ವಿಶೇಷ ಅಂದ್ರೆ ಈ ಚಿತ್ರ ಕನ್ನಡದಲ್ಲೂ ಡಬ್ ಆಗಿ ಬಿಡುಗಡೆಯಾಗಿದೆ. ಆದರೆ, ಕರ್ನಾಟಕದ ಅನೇಕ ಕಡೆ ಕನ್ನಡ ವರ್ಷನ್ ಸಿನಿಮಾ ಪ್ರದರ್ಶಿಸುತ್ತಿಲ್ಲ. ಕನ್ನಡದಲ್ಲಿ ಡಬ್ ಆಗಿದ್ದರೂ ಚಿತ್ರಮಂದಿರಗಳು ಕನ್ನಡ ವರ್ಷನ್ ಚಿತ್ರ ಪ್ರದರ್ಶಿಸದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬುಕ್ ಮೈ ಶೋನಲ್ಲಿ ಹುಡುಕಿದರೆ ಬೆಂಗಳೂರಿನ ಎರಡು ಚಿತ್ರಮಂದಿರದಲ್ಲಿ ಕೇವಲ ಎರಡು ಶೋ ಮಾತ್ರ ಕನ್ನಡ ವರ್ಷನ್ ‘ನೋ ಟೈಂ ಟು ಡೈ’ ಸಿನಿಮಾ ಪ್ರದರ್ಶನವಾಗುತ್ತಿದೆ.

ಇನ್ನು ನಗರದ ವಿಕ್ಟರಿ ಸಿನಿಮಾಸ್ (ಹಳೆಯ ವಿಶಾಲ್) ನೋ ಟೈಂ ಟು ಡೈ ಇಂಗ್ಲಿಷ್ ಭಾಷೆಯಲ್ಲಿ ಪ್ರಸಾರ ಮಾಡುತ್ತಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಚಿತ್ರಮಂದಿರದ ಮಾಲೀಕರನ್ನು ಪ್ರಶ್ನಿಸಿದರೆ, ಅದಕ್ಕೆ ಬೇರೆಯದ್ದೇ ಕಾರಣ ಕೊಟ್ಟಿದ್ದಾರೆ. ಈ ಸ್ಪಷ್ಟನೆ ಒಪ್ಪದ ಡಬ್ಬಿಂಗ್ ಪರ ಹೋರಾಟಗಾರರು ವಿಕ್ಟರಿ ಸಿನಿಮಾಸ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಚಿತ್ರಗಳನ್ನು ನೇರವಾಗಿ ಬಿಡುಗಡೆ ಮಾಡುವ ಈ ಕನ್ನಡ ದ್ರೋಹಿಗಳಿಗೆ ಕನ್ನಡ ಪರ ಸಂಘಟನೆಗಳು ತಕ್ಕ ಪಾಠ ಕಲಿಸಬೇಕು’ ಎಂದು ಡಬ್ಬಿಂಗ್ ಚಳವಳಿಗಾರ ಗಣೇಶ್ ಚೇತನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಗಣೇಶ್ ಚೇತನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮತ್ತೊಬ್ಬ ಡಬ್ಬಿಂಗ್ ಪರ ಕನ್ನಡ ಹೋರಾಟಗಾರ ಅರುಣ್ ಜಾವಗಲ್, ”ವೀರೇಶ್ ಮತ್ತು ವಿಕ್ಟರಿ ಚಿತ್ರಮಂದಿರಗಳು ಹಿಂದೆ ವಾಣಿಜ್ಯ ಮಂಡಳಿಯ ಅದ್ಯಕ್ಷರಾಗಿದ್ದವರ ಒಡೆತನದ ಚಿತ್ರಮಂದಿರಗಳು ಅಲ್ಲವೇ? ಜೇಮ್ ಬಾಂಡ್ ಚಿತ್ರ ಕನ್ನಡಕ್ಕೆ ಡಬ್ ಆಗಿದ್ರೂ ಹಾಕದೇ ಸುಳ್ಳು ಹಬ್ಬಿಸುತ್ತಿದ್ದಾರೆ ಅಂದ್ರೆ ಒಳಗೊಳಗೇ ಡಬ್ಬಿಂಗ್ ಚಿತ್ರ ತಡೆಯಲು ಪ್ರಯತ್ನ ಮಾಡುತ್ತಿರೋದು ಸ್ಪಷ್ಟ ಕಾಣುತ್ತಿದೆ.” ಎಂದು ಕಿಡಿಕಾರಿದ್ದಾರೆ.

”ಕ್ಷಮಿಸಿ, ಕನ್ನಡ ಧ್ವನಿಗೆ ಮಾರ್ಪಾಡು ಮಾಡಿರುವ ಚಿತ್ರದ ಅವತರಣಿಕೆಯನ್ನು ಪ್ರದರ್ಶನ ಮಾಡುತ್ತಿಲ್ಲ. ಇಂಗ್ಲಿಷ್ ಚಿತ್ರಗಳಿಗೆ ಕನ್ನಡದ ಶೀರ್ಷಿಕೆ (subtitles) ಹೊಂದಿಸುವ ಪ್ರಯತ್ನವನ್ನು ಚಿತ್ರೋದ್ಯಮವು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ, ಕನ್ನಡದ ಶೀರ್ಷಿಕೆ ಇರುವ ಇಂಗ್ಲಿಷ್ ಚಿತ್ರಗಳು ಲಭ್ಯವಾದ ಕೂಡಲೇ ಪ್ರದರ್ಶಿಸುವ ನಿರೀಕ್ಷೆ ಇದೆ” ಎಂದಿದ್ದಾರೆ.

ಇಂಗ್ಲಿಷ್ ಸಿನಿಮಾ ನೇರವಾಗಿ ಕನ್ನಡಕ್ಕೆ ಡಬ್ ಆಗಿರುವಾಗ ಸಬ್‌ಟೈಟಲ್ ಅಗತ್ಯವೇನಿದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಜೇಮ್ಸ್ ಬಾಂಡ್ ಸರಣಿಯ 25ನೇ ಸಿನಿಮಾ ‘ನೋ ಟೈಮ್ ಟು ಡೈ’. ಡ್ಯಾನಿಯಲ್ ಕ್ರೇಗ್‌ ಈ ಚಿತ್ರದಲ್ಲಿ ಪಾತ್ರಧಾರಿಯಾಗಿದ್ದಾರೆ. ಡ್ಯಾನಿಯಲ್ ಕ್ರೇಗ್ ಈವರೆಗೆ ನಾಲ್ಕು ಬಾಂಡ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ನಟಿಸಿದ್ದಾರೆ.’ಕ್ಯಾಸಿನೊ ರಾಯಲ್’, ‘ಸ್ಕೈ ಫಾಲ್’, ‘ಕ್ವಾಂಟಮ್ ಆಫ್ ಸೊಲಾಸ್’, ‘ಸ್ಪೆಕ್ಟರ್’ ಸಿನಿಮಾಗಳಲ್ಲಿ ಡ್ಯಾನಿಯಲ್ ಕ್ರೇಗ್ ನಟಿಸಿದ್ದಾರೆ. ಇದೀಗ ‘ನೋ ಟೈಮ್ ಟು ಡೈ’ ಸಿನಿಮಾದಲ್ಲಿ ನಟಿಸಿದ್ದು, ಬಾಂಡ್ ಪಾತ್ರದಲ್ಲಿ ಡ್ಯಾನಿಯಲ್ ಕ್ರೇಗ್ ನಟಿಸುತ್ತಿರುವ ಕೊನೆಯ ಸಿನಿಮಾ ಇದಾಗಿರಲಿದೆ.

Related Articles

Leave a Reply

Your email address will not be published. Required fields are marked *

Back to top button