ಸುದ್ದಿ

ಗಡಿ ದಾಟಿ ಬಂದ ಬಾಂಗ್ಲಾ ಬಾಲಕನನ್ನು ಸ್ವದೇಶಕ್ಕೆ ಕಳುಹಿಸಿದ ಬಿಎಸ್‌ಎಫ್

ಸೂಕ್ತ ದಾಖಲೆಗಳಿಲ್ಲದೇ ಅಂತಾರಾಷ್ಟ್ರೀಯ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ 13 ವರ್ಷದ ಬಾಲಕನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ತನ್ನ ಸಹವರ್ತಿ ಬಾಂಗ್ಲಾದೇಶ ಬಾರ್ಡರ್‌ ಗಾರ್ಡ್ (ಬಿಜಿಬಿ) ಸಿಬ್ಬಂದಿಗೆ ಹಸ್ತಾಂತರಿಸಿದೆ.

ಮಾನವ ಕಳ್ಳಸಾಗಾಟ ಮಾಡುತ್ತಿದ್ದ ಮಹಿಳೆ ಹಾಗೂ 13 ವರ್ಷದ ಬಾಲಕನನ್ನು ಶುಕ್ರವಾರದಂದು ಮೇಘಾಲಯದ ನೊಂಗ್‌ಖೇನ್‌ ಬಳಿ ಇರುವ ಬೇಲಿರಹಿತ ಗಡಿಯ ಬಳಿ ಬಿಎಸ್‌ಎಫ್ ಯೋಧರು ಸೆರೆ ಹಿಡಿದಿದ್ದರು. ಮಹಿಳೆ ಹಾಗೂ ಬಾಲಕ ಇಬ್ಬರು ಬಾಂಗ್ಲಾದೇಶದ ಸಿಲ್ಹೆಟ್‌ ಜಿಲ್ಲೆಯವರಾಗಿದ್ದಾರೆ. ಕಳ್ಳಸಾಗಾಟಗಾರ್ತಿಯನ್ನು ಭಾಗ್‌ಮಾರಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.

ಬಾಲಕನನ್ನು ಮರಳಿ ತನ್ನ ದೇಶಕ್ಕೆ ಕಳುಹಿಸುವುದು ಬಿಎಸ್‌ಎಫ್‌ ಅಳವಡಿಸಿಕೊಂಡಿರುವ ಮಾನವೀಯ ನಡೆಯ ಭಾಗವಾಗಿದೆ ಎಂದು ಪಡೆಯ ಮೇಘಾಲಯ ಗಡಿ ಪ್ರದೇಶದ ಐಜಿಪಿ ಇಂದರ್‌ಜಿತ್‌ ಸಿಂಗ್ ರಾಣಾ, ಬಾಲಕ ಅಪ್ರಾಪ್ತ ವಯಸ್ಸಿನವನಾದ ಕಾರಣ ಹೀಗೆ ಮಾಡಲಾಗಿದೆ ಎಂದಿದ್ದಾರೆ.

“ಎರಡೂ ದೇಶಗಳ ಗಡಿ ಭದ್ರತಾ ಸಿಬ್ಬಂದಿ ಈ ರೀತಿಯ ವಿಚಾರಗಳಲ್ಲಿ ಪರಸ್ಪರ ಹೊಂದಾಣಿಕೆಯೊಂದನ್ನು ಮಾಡಿಕೊಂಡಿದ್ದು ಸ್ಪಷ್ಟವಾದ ಸಂಪರ್ಕದಿಂದ ವಿಚಾರಗಳನ್ನು ಬಗೆಹರಿಸಿಕೊಂಡು ಉಭಯ ದೇಶಗಳ ನಡುವಿನ ನಂಬಿಕೆ ವರ್ಧಿಸಲು ಮುಂದಾಗಿವೆ,” ಎಂದು ರಾಣಾ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button