ನಾಗ್ಪುರ ಶಿಕ್ಷಣ ನೀತಿ: ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಕಾಂಗ್ರೆಸ್ ಹೇಳಿಕೆ
ಬೆಂಗಳೂರು: ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕ್ರಮಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಆರು ತಿಂಗಳಾದ ಬಳಿಕ ಕಲಾಪ ನಡೆಯುತ್ತಿದೆ. ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಪ್ರಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಬೇಕಿದೆ. ನಮ್ಮ ಮಕ್ಕಳ ಭವಿಷ್ಯ ಇದರಲ್ಲಿ ಅಡಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.
ಕಲಾಪವನ್ನು ಮುಂದುವರಿಸಲು ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಎದ್ದು ನಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಇದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ, ನಾಗ್ಪುರ ಶಿಕ್ಷಣ ನೀತಿ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ‘ನಾಗ್ಪುರ ಶಿಕ್ಷಣ ನೀತಿಯಾಗಲಿ, ಆರ್ಎಸ್ಎಸ್ ಶಿಕ್ಷಣ ನೀತಿಯೇ ಆಗಲಿ, ಅದರಿಂದ ಒಳ್ಳೆಯದು ಆಗುವುದಿದ್ದರೆ ಆಗಲಿ ಬಿಡಿ’ ಎಂದು ಹೇಳಿದರು.
ಅದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ‘ನೀವು ಆರ್ಎಸ್ಎಸ್ ಪರ ಇದ್ದೀರಿ’ ಎಂದು ತಿಳಿಸಿದರು.
‘ಹೌದು, ನಾನು ಆರ್ಎಸ್ಎಸ್ ಪರ ಇದ್ದೀನಿ’ ಎಂದು ಕಾಗೇರಿ ಹೇಳಿದರು.
ಈ ಕೋಲಾಹಲದ ನಡುವೆ ಎದ್ದು ನಿಂತ ಸಿಎಂ ಬಸವರಾಜ ಬೊಮ್ಮಾಯಿ, ಆರ್ಎಸ್ಎಸ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡರು.
ಆರ್ಎಸ್ಎಸ್ ಪರ- ವಿರೋಧದ ಘೋಷಣೆಗಳು ಕಲಾಪದಲ್ಲಿ ಮೊಳಗಿದವು. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಷೋಷಣೆ ಕೂಗಿದರು.
ಪ್ರತಿಪಕ್ಷಗಳ ನಾಯಕರ ವಿರೋಧದ ಹೊರತಾಗಿಯು ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಲಾಗಿದೆ ಎಂದು ಕಾಗೇರಿ ಘೋಷಿಸಿದರು.