ಕ್ರೈಂ

₹ 2 ಲಕ್ಷ ಲಂಚ: ಕೆಎಎಸ್‌ ಅಧಿಕಾರಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಸರ್ಕಾರದ ಯೋಜನೆಯೊಂದಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನ ಮಾಲೀಕರಿಗೆ ಪರಿಹಾರದ ಚೆಕ್‌ ವಿತರಿಸಲು ₹ 2 ಲಕ್ಷ ಲಂಚ ಪಡೆಯುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಅವರ ಕಚೇರಿಯ ವ್ಯವಸ್ಥಾಪಕನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಂಗಳವಾರ ಬಂಧಿಸಿದೆ.

ಅರಮನೆ ರಸ್ತೆಯಲ್ಲಿರುವ ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ-1 ಎನ್. ತೇಜಸ್‌ ಕುಮಾರ್‌ ಮತ್ತು ಅವರ ಕಚೇರಿಯ ವ್ಯವಸ್ಥಾಪಕ ದಾಸೇಗೌಡ ಬಂಧಿತ ಅಧಿಕಾರಿಗಳು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಲ್ಕಾಪುರ ಗ್ರಾಮದಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಮಾಲೀಕರಿಂದ ಲಂಚ ಪಡೆಯುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಎಸ್‌ ಅಧಿಕಾರಿಯೂ ಆರೋಪಿ: ‘ಸ್ವಾಧೀನಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡುವಂತೆ ಜಮೀನಿನ ಮಾಲೀಕರು ವಿಶೇಷ ಭೂಸ್ವಾಧೀನಾಧಿಕಾರಿ-1 ಹುದ್ದೆಯಲ್ಲಿರುವ ಕೆಎಎಸ್‌ ಅಧಿಕಾರಿ ತೇಜಸ್‌ ಕುಮಾರ್‌ ಅವರನ್ನು ಭೇಟಿಮಾಡಿದ್ದೆ. ಅವರು ₹ 13 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ₹ 10.50 ಲಕ್ಷವನ್ನು ಮೊದಲೇ ಪಡೆದುಕೊಂಡಿದ್ದರು. ಉಳಿದ ಮೊತ್ತ ನೀಡುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಜಮೀನು ಮಾಲೀಕ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ಮಂಗಳವಾರ ದೂರುದಾರರು ಕೆಐಎಡಿಬಿ ಕಚೇರಿಗೆ ಭೇಟಿನೀಡಿದಾಗ, ತೇಜಸ್‌ ಪರವಾಗಿ ದಾಸೇಗೌಡ ಲಂಚದ ಹಣ ಪಡೆದುಕೊಂಡರು. ತಕ್ಷಣ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದರು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಂಚದ ಹಣ ಹಾಗೂ ಪರಿಹಾರ ವಿತರಣೆಗೆ ಸಂಬಂಧಿಸಿದ ಕಡತಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ಹಂತದ ತನಿಖೆ ಪೂರ್ಣಗೊಂಡ ಬಳಿಕ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button