ತುಳಿತಕ್ಕೊಳಗಾದ ಸಮಾಜದ ಹುಡುಗನ ಸಂಘರ್ಷವೇ ‘ಲವ್ ಸ್ಟೋರಿ’: ಶೇಖರ್ ಕಮ್ಮುಲ
ತೆಲುಗಿನ ನಿರ್ದೇಶಕ ಶೇಖರ್ ಕಮ್ಮುಲ ಬೆಳೆದು ಬಂದ ರೀತಿ ಅದ್ಭುತ. ಎಲ್ಲರೂ ಒಂದು ಮಾದರಿಯ ಸಿನಿಮಾಗಳನ್ನು ಮಾಡುತ್ತಿರುವಾಗ ಭಿನ್ನವಾದ, ಸಮಾಜಕ್ಕೆ ಹತ್ತಿರವಾದ, ಮನಸ್ಸಿಗೆ ಹಿತ ಅನುಭೂತಿ ನೀಡುವ ಸಿನಿಮಾಗಳನ್ನು ಮಾಡಿ ತಮಗಾಗಿಯೇ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಸೃಷ್ಟಿಸಿಕೊಂಡವರು ಕಮ್ಮುಲ.
ಹೊಸಬರೊಟ್ಟಿಗೆ ಸಿನಿಮಾಗಳನ್ನು ಮಾಡಿ ದೊಡ್ಡ-ದೊಡ್ಡ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಮ್ಮುಲ ಈಗ ನಾಗ ಚೈತನ್ಯ, ತಮಿಳಿನ ಧನುಷ್ ಅಂಥಹಾ ದೊಡ್ಡ ಸೂಪರ್ ಸ್ಟಾರ್ಗಳೊಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.
ಯಾವುದೇ ‘ಇಸಂಗಳ’ ಗೊಡವೆಗೆ ಹೋಗದೆ ಭಾವನೆಗಳುಳ್ಳ ಸಿನಿಮಾ ಮಾಡುತ್ತಿದ್ದ ಶೇಖರ್ ಕಮ್ಮುಲ ಮೊದಲ ಬಾರಿಗೆ ತುಸು ಗಂಭೀರವಾದ ಕತೆಯನ್ನು ‘ಲವ್ ಸ್ಟೋರಿ’ ಸಿನಿಮಾ ಮೂಲಕ ಆಯ್ದುಕೊಂಡಿದ್ದಾರೆ. ಜಾತಿ ಸಂಘರ್ಷದ ಕತೆಯುಳ್ಳ ‘ಲವ್ ಸ್ಟೋರಿ’ ಸಿನಿಮಾವು ಸೆಪ್ಟೆಂಬರ್ 24ರಂದು ಬಿಡುಗಡೆ ಆಗುತ್ತಿದ್ದು, ತಮ್ಮ ಸಿನಿಮಾದ ಬಗ್ಗೆ ಶೇಖರ್ ಕಮ್ಮುಲ ಆಡಿರುವ ಮಾತುಗಳು ಇಲ್ಲಿವೆ.

ಹಿಂದೆ ನಾನು ಮಾಡಿದ ‘ಆನಂದ್’, ‘ಗೋದಾವರಿ’ ಚಿತ್ರಗಳನ್ನು ತೆಗೆದುಕೊಂಡರೆ, ಅಥವಾ ಇತ್ತೀಚಿನ ‘ಫಿದಾ’ ತೆಗೆದುಕೊಂಡರು ಇಲ್ಲೆಲ್ಲ ಪ್ರೇಮಕಥೆಯ ಜೊತೆಗೆ ಒಂದು ನವಿರಾದ ಹಾಸ್ಯವೂ ಬೆರೆತಿತ್ತು ಹೀಗಾಗಿ ಇವನ್ನೆಲ್ಲ rom-com ಚಿತ್ರಗಳು ಅಂತ ನೀವು ಪರಿಗಣಿಸಬಹುದು. ಇಲ್ಲೆಲ್ಲಾ ಮನಸ್ತಾಪಗಳು, ಸಣ್ಣ ಪುಟ್ಟ ನೋವು ಯಾತನೆಗಳು ಎಲ್ಲವನ್ನೂ ನಾವು ಹೇಗೆ ನಿಜಜೀವನದಲ್ಲಿ ಎದುರಿಸುತ್ತೇವೆ ಮತ್ತು ಅದರಿಂದ ಹೇಗೆ ಹೊರಬರುತ್ತವೆ ಎಂದು ಹೇಳುವ ಪ್ರಯತ್ನವಾಗಿತ್ತು. ಆದರೆ ‘ಲವ್ ಸ್ಟೋರಿ’ಗೆ ಬಂದರೆ ಇಲ್ಲಿ ಜೀವನದ ಸಂಘರ್ಷವಿದೆ. ತೆಲಂಗಾಣದ ಸಣ್ಣ ಪಟ್ಟಣದಿಂದ ತುಳಿತಕ್ಕೊಳಗಾದ ಸಮಾಜದ ಹುಡುಗನೊಬ್ಬ ಬದುಕು ಅರಸಿ ಹೈದರಾಬಾದ್ ಸೇರುತ್ತಾನೆ ಅದೇ ರೀತಿ ಮತ್ತೊಂದು ಸಣ್ಣ ಹಳ್ಳಿಯ ಇಲ್ಲಿಗೆ ಕೂಡ ಬದುಕಿಗಾಗಿ ನಗರಕ್ಕೆ ಬರುತ್ತಾಳೆ. ಇಲ್ಲಿ ಬದುಕಿನ ಪ್ರಶ್ನೆ ಇದೆ, ಜೊತೆಗೊಂದು ಪ್ರೀತಿಯ ಕಥೆ ಇದೆ. ಇದರ ಮಧ್ಯೆ ಸಮಾಜ ನಿಂತಿದೆ. ಇದೆಲ್ಲದರ ಜೊತೆಗೆ ಜೀವನದ ಸಂಗೀತವು ಬೆರೆತಿದೆ. ಇದು ನಾನು ಮೊದಲ ಬಾರಿಗೆ ಮಾಡುತ್ತಿರುವ ಪೂರ್ಣಪ್ರಮಾಣದ ಪ್ರೇಮಕಥೆ. ಹಿಂದಿನ rom-com ಗಳಿಗಿಂತ ಇದು ಭಿನ್ನವಾದ ಮ್ಯೂಸಿಕಲ್ ಲವ್ ಸ್ಟೋರಿ ಅಂತ ಹೇಳೋದಕ್ಕೆ ನನಗೆ ಸಂತೋಷವೆನಿಸುತ್ತದೆ. ಇದು ಸಣ್ಣಪುಟ್ಟ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾದ ಚಿತ್ರವಲ್ಲ, ಬದಲಾಗಿ ಒಂದು ದೊಡ್ಡ ಸಂಘರ್ಷವಿದೆ. ಈ ಸಂಘರ್ಷದಲ್ಲಿ ಹದವಾಗಿ ಸಂಗೀತವೂ ಸೇರಿ ‘ಲವ್ ಸ್ಟೋರಿ’ ಸಿದ್ಧವಾಗಿದೆ.ನನ್ನ ಯಾವುದೇ ಚಿತ್ರದಲ್ಲೂ ದೊಡ್ಡ ಹೀರೋಯಿಸಂ, ವಿಲನೀಸಂ, ಗ್ಲಾಮರಸ್ ಹೀರೋಯಿನ್ಗಳು, ರಕ್ತಪಾತ ಬಡೆದಾಟ, ಅದ್ದೂರಿ ವೆಚ್ಚದ ಡ್ರೀಮ್ ಸಾಂಗುಗಳು, ಸೈಡ್ ಟ್ರ್ಯಾಕ್ ನಲ್ಲಿ ನಡೆಯುವ ಕಾಮಿಡಿ ಇದ್ಯಾವುದೂ ಇರುವುದಿಲ್ಲ. ನಾನು ಆಯ್ಕೆಮಾಡಿಕೊಳ್ಳುವ ಕಥೆಗಳು ತುಂಬಾ ಸರಳವಾಗಿರುತ್ತದೆ. ಜೊತೆಗೆ ಅದು ಸಮಾಜದಿಂದಲೇ ಬಂದಿರುತ್ತದೆ. ವ್ಯಕ್ತಿಗಳು ಅವರ ಮನಸ್ತತ್ವಗಳು ನನ್ನ ಎಲ್ಲಾ ಕಥೆಗಳ ಪ್ರಧಾನ ವಸ್ತುವಾಗಿರುತ್ತದೆ. ಸರಳವಾದ ಕಥೆ, ಇಂಪಾದ ಸಂಗೀತ ಇದರ ಮಧ್ಯೆ ಜೀವನದ ಒಂದು ಪಯಣವನ್ನು ನಾನು ಪ್ರಧಾನವಾಗಿ ತೋರಿಸುತ್ತೇನೆ. ಇದಕ್ಕಿಂತ ಹೆಚ್ಚಿಗೆ ಬೇರೇನೂ ನಾನು ಮಾಡಲು ಇಚ್ಛಿಸುವುದಿಲ್ಲ. ಮುಂದೆ ಕೂಡ ನಾನು ಮಾನವೀಯ ಸಂಬಂಧಗಳನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತೇನೆ.