ಈ ಹಿಂದೆ ಒಡೆದ ಎಲ್ಲಾ ದೇವಾಲಯಗಳನ್ನು ಬಿಜೆಪಿ ಪುನರ್ ನಿರ್ಮಾಣ ಮಾಡಲಿದೆ: ಶಾಸಕ ಸೋಮ್
ಮೀರತ್: ಮಸೀದಿಗಳನ್ನು ಕಟ್ಟಲು ಈ ಹಿಂದೆ ಒಡೆದಿರುವ ಎಲ್ಲಾ ದೇವಾಲಯಗಳನ್ನು ಮತ್ತೆ ಭಾರತೀಯ ಜನತಾ ಪಕ್ಷ ಪುನರ್ ನಿರ್ಮಿಸಲಿದೆ ಎಂದು ಉತ್ತರಪ್ರದೇಶದ ಸರ್ಧಾನಾ ವಿಧಾನಸಭಾ ಕ್ಷೇತ್ರದ ಶಾಸಕ ಸಂಗೀತ್ ಸೋಮ್ ತಿಳಿಸಿರುವುದಾಗಿ ವರದಿ ಹೇಳಿದೆ.
ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಮಯಕ್ಕೆ ತಕ್ಕಂತೆ ಬದಲಾಗುವ ಹಿಂದು ಎಂದು ಶಾಸಕ ಸೋಮ್ ಆರೋಪಿಸಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಸ್ವಾಮೀಜಿಗಳನ್ನು ಬೆದರಿಸಿದ್ದ ಜನರು ಈಗ ಹರಿದ್ವಾರಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವಕರ್ಮ ದೇವಸ್ಥಾನ ನಿರ್ಮಿಸುವುದಾಗಿ ಘೋಷಿಸಿದ್ದಾರೆ ಎಂದು ಹಿಂದಿನ ಸಮಾಜವಾದಿ ಪಕ್ಷಕ್ಕೆ ಸೋಮ್ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೋಮ್, ಕಳೆದ ನಾಲ್ಕುವರೆ ವರ್ಷಗಳ ಕಾಲಾವಧಿಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಉತ್ತರಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿದ್ದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಜನರು ಕಾಲಕ್ಕೆ ತಕ್ಕ ಹಿಂದೂಗಳಾಗತೊಡಗಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.