ರಾಯಚೂರು | ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತ್ಯು ಆರೋಪ; ಕುಟುಂಬಸ್ಥರಿಂದ ಆಯಂಬುಲೆನ್ಸ್ ಧ್ವಂಸ

ರಾಯಚೂರು: ಜಿಲ್ಲೆಯ ಮಸ್ಕಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ್ದು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಸಂಬಂಧ ಬಾಣಂತಿಯ ಕುಟುಂಬಸ್ಥರು ಆಸ್ಪತ್ರೆಯ ಮುಂದೆ ಧರಣಿ ನಡೆಸಿ, ಕಲ್ಲು ತೂರಾಟ ಮಾಡಿದ್ದು, ಆಯಂಬುಲೆನ್ಸ್‌ನ ಗಾಜು ಪುಡಿಪುಡಿಯಾಗಿದೆ.
ಮಸ್ಕಿ ಪಟ್ಟಣದ ಸಿದ್ದಮ್ಮ ಎನ್ನುವ ಬಾಣಂತಿಯನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸೋಮವಾರ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಆಸ್ಪತ್ರೆಯ ಮುಂದೆ ಸಂಬಂಧಿಕರು ಜಮಾವಣೆಗೊಂಡು ಧರಣಿ ನಡೆಸಿ, ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರೋಗ್ಯ ಮತ್ತು ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಡಾ.ಶಿವಕುಮಾರ, ಲಿಂಗಸುಗೂರು ತಾಲೂಕು ವೈದ್ಯಾಧಿಕಾರಿ ಅಮರೇಶ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಧರಣಿಯಿಂದ ಉಂಟಾಗಿದ್ದ ಬಿಗುವಿನ ವಾತಾವರಣ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಗಳು ಹರಸಾಹಸಪಟ್ಟರು.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ
