ಸಿನಿಮಾ

ಜನಾರ್ಧನ ರೆಡ್ಡಿ ಜೈಲು ಸೇರುತ್ತಿದ್ದಂತೆ ಮಗನ ಸಿನಿಮಾ ರಿಲೀಸ್‌ಗೆ ತಯಾರಿ: ಏನಿದು ‘ಜೂನಿಯರ್’ ಲೆಕ್ಕಾಚಾರ?

ಒಂದು ಕಾಲದಲ್ಲಿ ಬಳ್ಳಾರಿ ದೊರೆ ಅಂತಲೇ ಕರೆಸಿಕೊಳ್ಳುತ್ತಿದ್ದ ಜನಾರ್ಧನ ರೆಡ್ಡಿ ವೈಭೋಗದ ಜೀವನ ನಡೆಸಿದ್ದರು. ಗಣಿ ದಣಿಗಳಾಗಿ ವೈರಿಗಳ ಮುಂದೆ ಮೆರೆದವರು. ರಾಜಕೀಯಕ್ಕೆ ಎಂಟ್ರಿ ಕೊಟ್ಟು ಗೆದ್ದವರು. ಉದ್ಯಮ ಹಾಗೂ ರಾಜಕೀಯ ಎರಡರಲ್ಲೂ ಯಶಸ್ಸು ಸಾಧಿಸಿದ್ದ ಜನಾರ್ಧನ ರೆಡ್ಡಿಯಿಂದ ಅಕ್ರಮ ಗಣಿಗಾರಿಕೆ ಎಲ್ಲವನ್ನು ಕಸಿದುಕೊಂಡಿದೆ.

ಕಳೆದ ಒಂದೂವರೆ ದಶಕದಿಂದ ಇದೇ ಪ್ರಕರಣದ ಸುತ್ತ ಅವರ ಜೀವನ ಸಾಗುತ್ತಿದೆ.

1999ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಜನಾರ್ಧನ ರೆಡ್ಡಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು. ಸಚಿವರಾಗಿ ರಾಜಕೀಯದಲ್ಲೂ ಉತ್ತುಂಗದಲ್ಲಿದ್ದ ಜನಾರ್ಧನ ರೆಡ್ಡಿ ಅದ್ಯಾವಾಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಕ್ಕಿಕೊಂಡರೋ ಎಲ್ಲೂ ಹೊರಟು ಹೋಯ್ತು. ಗಣಿದಣಿ ಅನ್ನೋ ಪಟ್ಟನೂ ಹೋಯ್ತು. ರಾಜಕೀಯ ಭವಿಷ್ಯನೂ ಡೋಲಾಯಮಾನವಾಯ್ತು. ಇನ್ನೇನು ರೆಡ್ಡಿ ಕಥೆ ಮುಗೀತು ಅಂತ ನಿಟ್ಟುಸಿರು ಬಿಟ್ಟವರ ಮುಂದೆ ಮತ್ತೆ ಗೆದ್ದು ಬೀಗಿದ್ದರು. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ಮತ್ತೆ ಅದೇ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಲ್ಲಿ ಇವರ ರಾಜಕೀಯ ಭವಿಷ್ಯ ಬಹುತೇಕ ಮುಗಿದಂತೆ ಅಂತ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ.

7 ವರ್ಷ ಶಿಕ್ಷೆ ಘೋಷಣೆಯಾದ ಬಳಿಕ ಜನಾರ್ಧನ ರೆಡ್ಡಿ ರಾಜಕೀಯ ಭವಿಷ್ಯವೇನು? ಅವರ ಮುಂದಿನ ನಡೆಯೇನು? ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅದಕ್ಕೆ ಜನಾರ್ಧನ ರೆಡ್ಡಿ ಈಗ ಹೊಸ ಗಾಳವನ್ನು ಉರುಳಿಸಿದಂತೆ ಇದೆ. ಅದುವೇ ‘ಜೂನಿಯರ್’. ಮಗನನ್ನು ಹೀರೋ ಮಾಡುವುದಕ್ಕೆ ರೆಡ್ಡಿ ಮೂರು ವರ್ಷಗಳ ಹಿಂದೆನೇ ಮುಹೂರ್ತ ಮಾಡಿದ್ದರು. ಅಲ್ಲಿಂದ ಮಗನ ಸಿನಿಮಾ ಶೂಟಿಂಗ್ ನಡೆಯುತ್ತಿದ್ದರೂ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಈಗ ಜನಾರ್ಧನ ರೆಡ್ಡಿ ಜೈಲು ಸೇರಿದಂತೆ ಪುತ್ರ ಕಿರೀಟಿಯ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಈ ಬೆಳವಣಿಗೆಯ ಹಿಂದೆ ರೆಡ್ಡಿಯ ರಾಜಕೀಯ ಲೆಕ್ಕಾಚಾರವೇನಾದರೂ ಇದೆಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ದಿಢೀರನೇ ‘ಜೂನಿಯರ್’ ಎಂಟ್ರಿ

2022ರಲ್ಲಿ ಜನಾರ್ಧನ ರೆಡ್ಡಿ ಮಗನನ್ನು ಹೀರೋ ಮಾಡುವುದಕ್ಕೆ ದೊಡ್ಡದಾಗಿ ಮುಹೂರ್ತ ಮಾಡಿದ್ದರು. ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮ್ ಪ್ರೊಡಕ್ಷನ್ ರೆಡ್ಡಿಯ ಪುತ್ರ ಕಿರೀಟಿ ಚೊಚ್ಚಲ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿತ್ತು. ಕನ್ನಡದಲ್ಲಿ ಮಾಯಾಬಜಾರ್ ಸಿನಿಮಾವನ್ನು ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಸಿನಿಮಾ ಮೇಕಿಂಗ್ ಆಗುತ್ತಲೇ ಇತ್ತು. ಆದರೆ, ಮೇಕಿಂಗ್ ಹಾಗೂ ರಿಲೀಸ್ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಹೀಗಾಗಿ ಜನರು ಕೂಡ ಈ ಸಿನಿಮಾವನ್ನು ಬಹುತೇಕ ಮರೆತೇ ಬಿಟ್ಟಿದ್ದರು.

ಕಿರೀಟಿ ಸಿನಿಮಾ ಮುಹೂರ್ತದ ವೇಳೆ, ಎಸ್‌ ಎಸ್‌ ರಾಜಮೌಳಿ, ರವಿಚಂದ್ರನ್, ಜೆನಿಯಾ ದೇಶ್‌ಮುಖ್ ಸೇರಿದಂತೆ ದೊಡ್ಡ ತಾರಾ ಬಳಗವೇ ಸೇರಿತ್ತು. ಆ ಮಟ್ಟಿಗೆ ಮುಹೂರ್ತ ಕಂಡಿದ್ದ ಸಿನಿಮಾ ಒಂದಿಷ್ಟು ದಿನ ಶೂಟಿಂಗ್ ಮಾಡಲಾಗಿತ್ತು. ಅದರ ಮೇಕಿಂಗ್ ಕೂಡ ಹೊರಬಿದ್ದಿತ್ತು. ಅದು ಬಿಟ್ಟರೆ, ಮತ್ತೆ ಕಿರೀಟಿ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಆದ್ರೀಗ ದಿಢೀರನೇ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ಜುಲೈ 18 ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಅನೌನ್ಸ್ ಕೂಡ ಮಾಡಿದೆ.

ರಾಜಕೀಯ ಲೆಕ್ಕಾಚಾರವಿದೆಯಾ?

ಹೀಗೆ ದಿಢೀರ್ ರಿಲೀಸ್ ಹಿಂದೆ ರಾಜಕೀಯ ಲೆಕ್ಕಾಚಾರವೇನಾದರೂ ಇದೆಯಾ? ಮೇಲ್ನೋಟಕ್ಕೆ ಜನಾರ್ಧನ್ ರೆಡ್ಡಿಯ ಒಂದೆರಡು ಲೆಕ್ಕಾಚಾರಗಳು ಹೀಗೂ ಇರಬಹುದೆಂದು ಊಹಿಸಲಾಗಿದೆ. ಮೇ 6 ರಂದು ಜನಾರ್ಧನ್ ರೆಡ್ಡಿಗೆ ಅಕ್ರಮ ಗಣಿಗಾರಿಕೆ ನೆಡೆಸಿದ್ದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ನಾಂಪಲ್ಲಿ ಸಿಬಿಐ ನ್ಯಾಯಾಲಯ 7 ವರ್ಷ ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಈ ಸಂಭಂಧ ಜನಾರ್ಧನ ರೆಡ್ಡಿ ಈಗ ಜೈಲು ಸೇರಿದ್ದಾರೆ. ಬೆಳವಣಿಗೆ ಹಿನ್ನೆಲೆಯಲ್ಲಿ ಇವರ ಶಾಸಕ ಸ್ಥಾನ ಏನಾಗುತ್ತೆ? ಎನ್ನುವ ಪ್ರಶ್ನೆ ಅವರ ಬೆಂಬಲಿಗರನ್ನು ಕಾಡಿತ್ತು.

ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಸಾಬೀತಾಗುತ್ತಿದ್ದಂತೆ ಶಾಸಕ ಸ್ಥಾನದಿಂದ ಅವರನ್ನು ಅನರ್ಹತೆಗೊಳಿಸಿ ಆದೇಶ ಹೊರಡಿಸಲಾಗಿದೆ. ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಆದೇಶಿಸಿದ್ದಾರೆ. ಈ ಆದೇಶ ಗಾಲಿ ಜನಾರ್ದನ ರೆಡ್ಡಿಯ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಿನ್ನೆಡೆ ಎಂದೇ ಹೇಳುತ್ತಿದ್ದಾರೆ. ಈ ಆದೇಶದ ಪ್ರಕಾರ, ಜನಾರ್ಧನ ರೆಡ್ಡಿ ಇನ್ನೂ ಆರು ವರ್ಷ ಶಾಸಕತ್ವ ಸ್ಥಾನಕ್ಕೆ ಅನರ್ಹರಾಗಿದ್ದಾರೆ. ಹೀಗಾಗಿ ರೆಡ್ಡಿ ಶಾಸಕ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಆ ಸ್ಥಾನಕ್ಕೆ ಮಗನನ್ನು ತರುವ ಯೋಚನೆ ಇರಬಹುದಾ? ಈಗ ಅನುಮಾನ ಹುಟ್ಟಿಕೊಂಡಿದೆ.

ಉತ್ತರಾಧಿಕಾರಿ ಯಾರು?

ಕಳೆದ ಬಾರಿ ಜೈಲಿನಿಂದ ಹೊರ ಬಂದ್ಮೇಲೆ ಬಿಜಿಪಿ ಪಕ್ಷದ ಮೇಲೆ ಮುನಿಸಿಕೊಂಡಿದ್ದರು. ಹೀಗಾಗಿ ಬಿಜೆಪಿ ತೊರೆದು, ತಮ್ಮದೇ ಸ್ವಂತ ಪಕ್ಷವನ್ನು ಸ್ಥಾಪಿಸಿದ್ದರು. ಈ ಪಕ್ಷದ ಮೂಲಕ ಚುನಾವಣಾ ಅಖಾಡಕ್ಕೆ ಇಳಿದು ಗಂಗಾವತಿ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಗೆದ್ದ ಕೆಲವೇ ದಿನಗಳ ಬಳಿಕ ತಮ್ಮ ಪಕ್ಷವನ್ನು ವಿಲೀನಗೊಳಿಸಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಆದ್ರೀಗ ಮತ್ತೆ ಜೈಲಿ ಸೇರಿದ್ದರಿಂದ ಈ ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಒಂದು ವೇಳೆ ಆರು ತಿಂಗಳ ಒಳಗೆ ಜನಾರ್ಧನ ರೆಡ್ಡಿ ಜಾಮೀನು ಪಡೆಯಲು ಯಶಸ್ವಿಯಾದರೆ, ಅವರ ಶಾಸಕ ಸ್ಥಾನ ಉಳಿಯುತ್ತೆ. ಹಾಗೇನಾದರೂ ಆಗದೇ ಇದ್ದಲ್ಲಿ ಇನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಒಂದು ವೇಳೆ ಜಾಮೀನು ಸಿಗದೇ ಹೋದರೇ ಏನು? ಗಂಗಾವತಿ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕೆ ಉತ್ತರಾಧಿಕಾರಿಯನ್ನು ಅಖಾಡಕ್ಕೆ ಇಳಿಸಲೇ ಬೇಕಿದೆ. ಸದ್ಯದ ಮಾಹಿತಿ ಪ್ರಕಾರ, ಪತ್ನಿ ಅರುಣಾ ಅವರನ್ನು ಬ್ಯಾಕಪ್‌ ಪ್ಲ್ಯಾನ್ ಆಗಿ ಇಟ್ಟು ಕೊಂಡಿದ್ದಾರೆ ಎನ್ನುವ ವರದಿಗಳು ಕೂಡ ಹರಿದಾಡುತ್ತಿವೆ.

ಕಿರೀಟಿ ರಾಜಕೀಯ ಎಂಟ್ರಿ?

ಮಗನ ಸಿನಿಮಾವನ್ನು ದಿಢೀರನೇ ರಿಲೀಸ್ ಮಾಡಲು ಹೊರಟಿದ್ದು ನೋಡಿದರೆ, ಜನಾರ್ಧನ ರೆಡ್ಡಿಯ ಲೆಕ್ಕಾಚಾರ ಬೇರೆನೇ ಇದ್ದಂತೆ ಇದೆ. ತಮ್ಮ ಮಗನನ್ನು ರಾಜಕೀಯದ ಮುನ್ನೆಲೆಗೆ ತರಲು ಈ ಪ್ರಯತ್ನ ಇರಬಹುದಾ? ಎಂಬುವ ಪ್ರಶ್ನೆ ಕೂಡ ಎದ್ದಿದೆ. ಯಾಕಂದ್ರೆ, ರೆಡ್ಡಿ ಜೈಲಿನೊಳಗೆ ಇರುವಾಗ ಮಗನ ಚೊಚ್ಚಲ ಸಿನಿಮಾ ರಿಲೀಸ್ ಆಗುವುದು ಎಂದರೇನು? ಒಂದು ವೇಳೆ ಆರು ತಿಂಗಳ ಒಳಗೆ ಜಾಮೀನು ಸಿಗುವ ಸೂಚನೆ ಇದ್ದಿದ್ದರೆ, ಖಂಡಿತಾ ಇನ್ನು ಆರು ತಿಂಗಳು ಕಾಯುತ್ತಿದ್ದರು. ಆದರೆ, ರೆಡ್ಡಿ ಜೈಲಿ ಸೇರಿ ಇನ್ನೂ ತಿಂಗಳಾಗಿಲ್ಲ. ಅಷ್ಟರಲ್ಲೇ ಕಿರೀಟಿ ಸಿನಿಮಾ ರಿಲೀಸ್‌ಗೆ ಅಸ್ತು ಎಂದಿದ್ದಾರೆ.

ಇತ್ತೀಚೆಗೆ ರಾಜಕಾರಣಿಗಳ ಮಕ್ಕಳು ರಾಜಕೀಯ ಅಖಾಡಕ್ಕೆ ಇಳಿಯುವುದಕ್ಕೂ ಮುನ್ನ ಮೊದಲು ಸಿನಿಮಾ ಮಾಡುತ್ತಾರೆ. ಕನ್ನಡದಲ್ಲಿ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆನೇ ಇವೆ. ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕೆಲ ಸಿನಿಮಾದಲ್ಲಿ ನಟಿಸಿದ ಬಳಿಕ ರಾಜಕೀಯಕ್ಕೆ ಧುಮುಕಿದ್ದಾರೆ. ಇತ್ತ ಕೃಷಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕೂಡ ಸಿನಿಮಾ ಮಾಡಿದ್ದರು. ಇತ್ತೀಚೆಗಷ್ಟೇ ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ಎಚ್ ಎಂ ರೇವಣ್ಣ ಪುತ್ರ ಅನೂಪ್ ಕೂಡ ಸಿನಿಮಾಗೆ ಎಂಟ್ರಿ ಕೊಟ್ಟು ಹಲವು ವರ್ಷಗಳಾಗಿವೆ. ಹಾಗೇ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಸಿನಿಮಾ ಮಾಡುತ್ತಿದ್ದು, ಮೈಸೂರು ಭಾಗದಿಂದ ರಾಜಕೀಯ ಅಖಾಡಕ್ಕೆ ಇಳಿಯಲು ಇದು ಸಿದ್ಧತೆ ಎನ್ನಲಾಗಿದೆ. ಇದೇ ದಾರಿಯಲ್ಲಿಯೇ ರೆಡ್ಡಿ ಕೂಡ ಮಗನನ್ನು ಕರೆದುಕೊಂಡು ಹೋಗುತ್ತಿದ್ದರು ಅನ್ನೋದು ಬಲ್ಲ ಮೂಲಗಳು ಹೇಳುವ ಮಾತು.

ಮಗನ ಮೊದಲ ಸಿನಿಮಾ ಹಿಟ್ ಆಗಲೇಬೇಕು ಎಂದು ರೆಡ್ಡಿ ಪಣ ತೊಟ್ಟಿದ್ದರು. ಈ ಸಿನಿಮಾ ಪ್ರಮುಖವಾಗಿ ಕನ್ನಡ ಹಾಗೂ ತಮಿಳು ಎರಡು ಭಾಷೆಗಳನ್ನು ಟಾರ್ಗೆಟ್ ಮಾಡಿದೆ ಅನ್ನೋದು ಸುದ್ದಿ. ಆದರೆ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ರವಿಚಂದ್ರನ್, ಜೆನಿಲಿಯಾ, ಶ್ರೀಲೀಲಾದಂತಹ ದೊಡ್ಡ ತಾರಾಗಣವೇ ‘ಜೂನಿಯರ್’ ಸಿನಿಮಾದಲ್ಲಿ ಇದೆ. ಹೀಗಾಗಿ ಕಿರೀಟಿಯ ರಾಜಕೀಯ ಪ್ರವೇಶಕ್ಕೆ ಈ ಸಿನಿಮಾ ಮೊದಲ ಹೆಜ್ಜೆ ಎಂದು ನಂಬಲಾಗಿದೆ. ಜನಾರ್ಧನ ರೆಡ್ಡಿ ತಮ್ಮ ಮುಂದಿನ ರಾಜಕೀಯ ಕನಸನ್ನು ಮಗನ ಮೂಲಕ ಕಾಣುವುದಕ್ಕೆ ‘ಜೂನಿಯರ್’ ಅನ್ನು ಹೊರ ಬಿಟ್ಟಿದ್ದಾರಾ? ಈ ಪ್ರಶ್ನೆ ಎಲ್ಲರೂ ಹುಟ್ಟಿಕೊಂಡಿರುವುದಂತೂ ಸತ್ಯ.

Related Articles

Leave a Reply

Your email address will not be published. Required fields are marked *

Back to top button