ಇತ್ತೀಚಿನ ಸುದ್ದಿ

ಆಶ್ರಮ ಸೇರಿದ್ದು, ದರ್ಶನ್‌ ಸಹಾಯ ಮಾಡಿದ್ದು ನಿಜವೇ: ಶೈಲಶ್ರೀ ಸುದರ್ಶನ್‌ ಹೇಳಿದ್ದೇನು?

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಆರ್‌.ಎನ್‌. ನಾಗೇಂದ್ರರಾಯರ ಸೊಸೆ ಶೈಲಶ್ರೀ ಸುದರ್ಶನ್ ಅವರು ಸದ್ಯ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆರ್.ಎನ್. ಸುದರ್ಶನ್ ಅವರ ಪತ್ನಿ ಶೈಲಶ್ರೀ ಅವರು ಕೂಡ ಚಿತ್ರರಂಗದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದರು.

ಇಂತಹ ಹಿರಿಯ ನಟಿ ವೃದ್ಧಾಶ್ರಮ ಸೇರಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗೆ ಬಹಿರಂಗಗೊಂಡಿದ್ದು, ಆಶ್ರಮ ಸೇರಿದ್ದೇಗೆ? ಸೇರಿಸಿದವರು ಯಾರು? ಎನ್ನುವುದರ ಬಗ್ಗೆ ಸ್ವತಃ ಶೈಲಶ್ರೀ ಸುದರ್ಶನ್ ಅವರೇ ಮಾತನಾಡಿದ್ದಾರೆ.

ಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಒಬ್ಬರು ನನ್ನನ್ನು ಮೊದಲು ಈ ವೃದ್ಧಾಶ್ರಮಕ್ಕೆ ಕರೆದುಕೊಂಡು ಬಂದರು. ಮೊದಲ ಸಲ ಮಾತನಾಡುವಾಗಲೇ ತುಂಬಾ ಆತ್ಮೀಯರು ಅನಿಸಿದರು. ಆಗಲೂ ನಾನು ಮುಂದೆ ಇಲ್ಲಿ ಇರುತ್ತೇನೆ ಅಂತಾ ಅಂದುಕೊಂಡಿರಲಿಲ್ಲ. ನಾನು ಒಂದು ಪ್ಲಾಟ್‌ನಲ್ಲಿ ವಾಸವಿದ್ದೆ. ಅದನ್ನು ಮಾಲೀಕರು ಮಾರಿದ ಕಾರಣ ನಾನು ಅಲ್ಲಿಂದಲೂ ಹೊರಬೇಕಾಯಿತು. ಕೊನೆಗೆ ಈ ಆಶ್ರಮಕ್ಕೆ ವಾಪಸ್‌ ಬರಬೇಕಾಯಿತು’ ಎಂದರು.

‘ನನಗೆ ಇಲ್ಲಿನ ವಾತಾವರಣ ತುಂಬಾ ಇಷ್ಟವಾಯ್ತು. ನಾನು ಈ ರೀತಿ ಬರುತ್ತೇನೆ. ಇಲ್ಲಿ ಇರುತ್ತೇನೆ ಅಂತಾ ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಈ ರೀತಿಯ ಜೀವನವೂ ಇದೆ ಅಂತಾ ನನಗೆ ಗೊತ್ತಿರಲಿಲ್ಲ. ಈ ಸಂಸ್ಥೆ ನಡೆಸುತ್ತಿರುವವರು ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡರು. ತುಂಬಾ ಪ್ರೀತಿಯಿಂದ ನೋಡಿಕೊಂಡರು. ನಾನು ನನ್ನ ಮನೆ ಬಿಡುವಾಗ ನನ್ನ ನಾದಿನಿ ಮಗ ಇದ್ದಕ್ಕಿಂತ ಇಲ್ಲಿಗೆ ತಂದು ಬಿಟ್ಟು ಇಲ್ಲಿಯೇ ಊಟ ಮಾಡಿಕೊಂಡಿರಿ, ನಾನು ಅಲ್ಲಿ ನಿಮ್ಮ ಮನೆ ಖಾಲಿ ಮಾಡುವ ಕೆಲಸ ನೋಡಿಕೊಳ್ಳುತ್ತೇನೆ ಅಂತಾ ಹೇಳಿ ಹೋದ’.

ನನ್ನ ಮನೆಯಲ್ಲಿ ತುಂಬಾ ವಸ್ತುಗಳಿದ್ದವು, ನನ್ನ ಆಭರಣಗಳಿದ್ದವು, ಆದರೆ ಈಗ ಯಾವುದೂ ಇಲ್ಲ. ಅದನೆಲ್ಲಾ ಯಾರು ತೆಗೆದುಕೊಂಡು ಹೋದರು ಅಂತನೂ ಗೊತ್ತಿಲ್ಲ. ಈಗ ಯಾರನ್ನೂ ಕೇಳಬೇಕು ಅಂತಾ ಗೊತ್ತಿಲ್ಲ. ನನ್ನ ನಾದಿನಿ ಮಗನನ್ನು ಕೇಳಲು ಆಗುವುದಿಲ್ಲ. ಅವನನ್ನು ಕೇಳಿ ಎದುರು ಹಾಕಿಕೊಳ್ಳುವುದು ಬೇಡ. ಅವನು ನನಗೆ ಸಹಾಯವನ್ನೇ ಮಾಡಿದ್ದಾನೆ ಅಂತಾ ಅನಿಸಿ ಸುಮ್ಮನಾಗಿದ್ದೇನೆ’ ಎಂದು ಹೇಳಿದರು.

ಇನ್ನು ಶೈಲಶ್ರೀ ಸುದರ್ಶನ್‌ ಅವರಿಗೆ ದರ್ಶನ್‌ ಸಹಾಯ ಮಾಡಿದ್ದು ನಿಜನಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದು ದರ್ಶನ್‌ ಕಡೆಯಿಂದ ಸಹಾಯವಾಗಿದೆ. ಅವರ ಸಹೋದರ ಇದಕ್ಕಿದಂತೆ ಬಂದು ಐವತ್ತು ಸಾವಿರ ರೂಪಾಯಿಯನ್ನು ನನ್ನ ಕೈಯಲ್ಲಿ ಇಟ್ಟರು. ನನ್ನ ತಮ್ಮ ನಿಮಗೆ ಕೊಡಲು ಹೇಳಿದ್ದಾರೆ ಅಂತಾ ಹೇಳಿ ಕೊಟ್ಟರು. ಜೀವನದಲ್ಲಿ ಮೊದಲ ಬಾರಿಗೆ ಯಾರೋ ನನಗೆ ಸುಮ್ಮನೆ ಹಣ ಕೊಟ್ಟರು. ದುಡಿದು ತಿಂದ ನನಗೆ ಈ ಹಣ ತೆಗೆದುಕೊಳ್ಳಲು ಮುಜುಗರವಾಯ್ತು. ಅವರೇ ಕೊನೆಗೆ ನನ್ನ ತಮ್ಮ ಕೊಡಲು ಹೇಳಿದ್ದಾನೆ. ದಯವಿಟ್ಟು ತೆಗೆದುಕೊಳ್ಳಿ ಅಂತಾ ಹೇಳಿದರು’.

‘ಅಲ್ಲದೇ ನಿಮಗೆ ಇನ್ನೂ ಏನಾದರೂ ಬೇಕಾ. ಇಲ್ಲೇ ಪಕ್ಕದಲ್ಲಿ ಮನೆ ಏನಾದರೂ ನೋಡುವ ಹಾಗಿದ್ದರೆ ನೋಡಿ, ಅದರ ಬಾಡಿಗೆಯನ್ನು ನಾವು ಕೊಡುತ್ತೇವೆ ಅಂತಾ ಹೇಳಿದರು. ನನಗೆ ಆ ರೀತಿ ತೆಗೆದುಕೊಳ್ಳಲು ಇಷ್ಟ ಇಲ್ಲ. ನಾನು ಮೊದಲಿನಿಂದಲೂ ಸ್ವಾಭಿಮಾನಿಯಾಗಿ ಬದುಕಲು ಇಷ್ಟಪಡುತ್ತೇನೆ. ನನಗೆ ವಯಸ್ಸಾಗಿದೆ ಅದಕ್ಕೆ ಅವರು ಸಹಾಯ ಮಾಡುತ್ತಿದ್ದಾರೆ ಅಂತಾ ನನಗೆ ಅನಿಸಲಿಲ್ಲ. ವಯಸ್ಸಾದರೂ ಕೂಡ ದುಡಿಯಬಹುದು ಎನ್ನುವ ಆಲೋಚನೆ ನನ್ನಲ್ಲಿತ್ತು’ ಎಂದು ಶೈಲಶ್ರೀ ಸುದರ್ಶನ್‌ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button