ಕಾಲುವೆಗೆ ನೀರು ಹರಿಸಲು ಒತ್ತಾಯ: ರೈತರ ಪ್ರತಿಭಟನೆ, ಮುಖಂಡರ ಬಂಧನ

ರಾಯಚೂರು ( ಜಾಲಹಳ್ಳಿ) : ನಾರಾಯಣಪುರ ಬಲದಂಡೆ ಕಾಲುವೆಗೆ ಏಪ್ರಿಲ್ 20ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ಪ್ರಾಂತ ರೈತ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಪ್ಪ ರಾಠೋಡ್ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದರು.
‘ರೈತರಿಗೆ ಅನುಕೂಲವಾಗುವಂತೆ ತಿರ್ಮಾನ ಕೈಗೊಳ್ಳಲಾಗುವುದು. ದಯವಿಟ್ಟು ಪ್ರತಿಭಟನೆ ಕೈಬಿಡಬೇಕು’ ಎಂದು ಮನವಿ ಮಾಡಿದರು.
ಪ್ರಾಂತ ರೈತ ಸಂಘಟನೆಯ ಮುಖಂಡರು ಲಿಖಿತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. ‘ಸಭೆಯಲ್ಲಿ ಕೈಗೊಳ್ಳುವ ತಿರ್ಮಾನ ಏನಿರುತ್ತೆ ಎನ್ನುವುದು ನಾನು ಮೊದಲೇ ಹೇಗೆ ಲಿಖಿತವಾಗಿ ನೀಡಲು ಸಾಧ್ಯ’ ಎಂದು ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಶ್ನಿಸಿದರು.
ರೈತರು ಲಿಖಿತ ಭರವಸೆ ನೀಡುವ ವರೆಗೂ ಪ್ರತಿಣಭಟನೆ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ತಿಂಥಣಿ ಬ್ರಿಜ್- ಕಲ್ಮಾಲ ರಾಜ್ಯ ಹೆದ್ದಾರಿಯ ಸಂಚಾರ ತಡೆದು ಪ್ರತಿಭಟನೆ ಮುಂದುವರಿಸಿದರು. ರಾಜ್ಯ ಹೆದ್ದಾರಿ ಸಂಚಾರ ಒತ್ತಡ ಹೆಚ್ಚಾದ ಕಾರಣ ಸಿಪಿಐ ಗುಂಡುರಾವ್ ಹಾಗೂ ಪೊಲೀಸ್ ಸಿಬ್ಬಂದಿ ಮುಖಂಡರನ್ನು ಬಂಧಿಸಿ ದೇವದುರ್ಗ ಪೊಲೀಸ್ ಠಾಣೆಗೆ ಒಯ್ದರು.