ತೆಲಂಗಾಣ ವಿಧಾನಸಭೆಯಲ್ಲಿ SC ಉಪ ವರ್ಗೀಕರಣ ಮಸೂದೆ ಆಂಗೀಕಾರ

ಹೈದರಬಾದ್: ತೆಲಂಗಾಣ ವಿಧಾನಸಭೆಯು ಪರಿಶಿಷ್ಟ ಜಾತಿ ಉಪ ವರ್ಗೀಕರಣವನ್ನು ಜಾರಿಗೆ ತರುವ ‘ತೆಲಂಗಾಣ ಪರಿಶಿಷ್ಟ ಜಾತಿಗಳ (ಮೀಸಲಾತಿ ತರ್ಕಬದ್ಧಗೊಳಿಸುವ) ಮಸೂದೆ- 2025’ಯನ್ನು ಮಂಗಳವಾರ ಅಂಗೀಕರಿಸಿತು.
ಮಸೂದೆಯನ್ನು ಮಂಡಿಸಿದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ‘ಸುಪ್ರೀಂ ಕೋರ್ಟ್ ಕಳೆದ ವರ್ಷ ಎಸ್.ಸಿ ಉಪ ವರ್ಗೀಕರಣದ ಪರವಾಗಿ ತೀರ್ಪು ನೀಡಿದ ನಂತರ ನಮ್ಮ ಸರ್ಕಾರವು ಸಂಪುಟ ಉಪಸಮಿತಿಯನ್ನು ರಚಿಸಿದೆ’ ಎಂದು ಹೇಳಿದರು.
ಎಸ್.ಸಿ ಉಪ ವರ್ಗೀಕರಣದ ಅನುಷ್ಠಾನಕ್ಕೆ ಶಿಫಾರಸುಗಳನ್ನು ಮಾಡಲು ಏಕ ಸದಸ್ಯ ನ್ಯಾಯಾಂಗ ಆಯೋಗವನ್ನು ನೇಮಿಸಿದ್ದ ಸರ್ಕಾರ, ಆ ಬಳಿಕ ಅದರ ವರದಿಯನ್ನು ಅಂಗೀಕರಿಸಿದೆ. ಆಯೋಗವು ರಾಜ್ಯದ 59 ಎಸ್.ಸಿ ಉಪ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಎಸ್.ಸಿಗಳಿಗೆ ಲಭ್ಯವಿರುವ ಶೇ15 ರಷ್ಟು ಮೀಸಲಾತಿಯ ಸಮಾನ ಹಂಚಿಕೆಯನ್ನು ಖಚಿತಪಡಿಸಿದೆ’ ಎಂದು ಮಾಹಿತಿ ನೀಡಿದರು.
15 ಉಪ ಜಾತಿಗಳನ್ನು ಒಳಗೊಂಡ ಮೊದಲ ಗುಂಪಿಗೆ ಶೇ 1 ಮೀಸಲಾತಿ, 18 ಉಪ ಜಾತಿಗಳು ಇರುವ ಎರಡನೇ ಗುಂಪಿಗೆ ಶೇ 9 ಮೀಸಲಾತಿ ಹಾಗೂ 26 ಉಪ ಜಾತಿಗಳನ್ನು ಒಳಗೊಂಡ ಮೂರನೇ ಗುಂಪಿಗೆ ಶೇ 5 ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.