ಅನಂತ ನಾಗ್, ರಿಕ್ಕಿ ಕೇಜ್ ಸೇರಿ ನಾಲ್ವರು ಕನ್ನಡಿಗರಿಗೆ ಪದ್ಮ ಪ್ರದಾನ

ಕನ್ನಡದ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಹೆಸರಾಂತ ನಟ ಅನಂತನಾಗ್, ಗ್ರಾಮಿ ಪ್ರಶಸ್ತಿ ಪುರಸ್ಕೃತ, ಸಿನಿಮಾ ಸಂಗೀತ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಸೇರಿದಂತೆ ನಾಲ್ವರು ಕನ್ನಡಿಗರಿಗೆ ಮಂಗಳವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಅನಂತ್‌ನಾಗ್ ಅವರಿಗೆ ಪದ್ಮಭೂಷಣ, ಗ್ರ್ಯಾಮಿ ಪ್ರಶಸ್ತಿ ವಿಜೇತ ಭಾರತೀಯ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಬೆಂಗಳೂರಿನ ಉದ್ಯಮಿ ಪ್ರಶಾಂತ್ ಪ್ರಕಾಶ್ ಹಾಗೂ ಬಾಗಲಕೋಟೆಯ ಗೊಂದಲಿ (ಜನಪದ ಹಾಡು) ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
68 ಸಾಧಕರಿಗೆ ರಾಷ್ಟ್ರಪತಿ ಮುರ್ಮು ಪದ್ಮ ಪ್ರಶಸ್ತಿ ಪ್ರದಾನ
2025ನೇ ಸಾಲಿನ ಪದ್ಮ ಪ್ರಶಸ್ತಿಗೆ ಪಾತ್ರರಾಗಿದ್ದ 68 ಸಾಧಕರಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ (ಪದ್ಮವಿಭೂಷಣ), ನರ್ತಕಿ ಶೋಭನಾ ಚಂದ್ರಕುಮಾರ್ (ಪದ್ಮಭೂಷಣ).ಸಾಧ್ವಿ ರಿತಾಂಬರ, (ಪದ್ಮಶ್ರೀ) ಸೇರಿ 68 ಸಾಧಕರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 2025ನೇ ಸಾಲಿನಲ್ಲಿ ಒಟ್ಟು 139 ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಆ ಪೈಕಿ ಏ.28ರಂದು 71 ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಇನ್ನುಳಿದ 68 ಸಾಧಕರಿಗೆ ಮಂಗಳವಾರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.