ಹಾಸನದ ಬಾನು ಮುಷ್ತಾಕ್‌ರ ‘ಹಾರ್ಟ್ ಲ್ಯಾಂಪ್’ ಕಥಾಸಂಕಲನಕ್ಕೆ ಬೂಕರ್ ಪ್ರಶಸ್ತಿ

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ವಿಶ್ವ ಮಟ್ಟದ ಪ್ರಶಸ್ತಿ ಗೌರವ ಲಭ್ಯವಾಗಿದೆ. ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಕನ್ನಡದ ಕೃತಿ ತನ್ನದಾಗಿಸಿಕೊಂಡಿದೆ. ಹಾಸನದ ಖ್ಯಾತ ಸಾಹಿತಿ ಬಾನು ಮುಷ್ತಾಕ್‌ರ ಕಥಾ ಸಂಕಲನ ‘ ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಿಕ್ಕಿದೆ.
ಸಾಹಿತಿ ಬಾನು ಮುಷ್ತಾಕ್ ಅವರ ಹಾರ್ಟ್ ಲ್ಯಾಂಪ್ ಕಥಾ ಸಂಕಲನ ಇಂಗ್ಲಿಷ್‌ಗೆ ಅನುವಾದಗೊಂಡಿತ್ತು. ಹಸೀನಾ ಮತ್ತು ಇತರೆ ಕಥೆಗಳು ಕಥಾ ಸಂಕಲದಿಂದ ಆಯ್ದ ಕಥೆಗಳನ್ನು ಹಾರ್ಟ್ ಲ್ಯಾಂಪ್ ಒಳಗೊಂಡಿದೆ. ಈ ಕೃತಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಲೇಖಕಿ ದೀಪಾ ಬಸ್ತಿ ಅನುವಾದ ಮಾಡಿದ್ದರು.
ಇದೇ ಮೊದಲ ಬಾರಿಗೆ ಬೂಕರ್ ಕನ್ನಡ ಸಾಹಿತ್ಯ ಸ್ಪರ್ಧೆಗೆ ಅವಕಾಶ ಕಲ್ಪಿಸಿತ್ತು. ಮೊದಲ ಅವಕಾಶದಲ್ಲಿ ಕನ್ನಡ ಸಾಹಿತ್ಯ ಪ್ರಶಸ್ತಿ ಗೆದ್ದುಕೊಂಡಿದೆ. ಮಂಗಳವಾರ ರಾತ್ರಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರ್ಟ್‌ಲ್ಯಾಂಪ್ ಕೃತಿ ಆಯ್ಕೆ ಮಾಡಲಾಗಿತ್ತು. ಬೂಕರ್ ಪ್ರಶಸ್ತಿ 50 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಒಳಗೊಂಡಿದೆ.
ಸಾಹಿತಿ ಬಾನು ಮನೆಯಲ್ಲಿ ಸಂಭ್ರಮ
ಬೂಕರ ಪ್ರಶಸ್ತಿ ಒಲಿದ ಹಿನ್ನೆಲೆ ಸಾಹಿತಿ ಬಾನು ಮುಸ್ತಾಕ್ ಕುಟುಂಬಸ್ಥರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪತಿ ಮುಷ್ತಾಕ್, ಪುತ್ರ ತಾಹೇರ್, ಸೊಸೆ ಆಯಿಷಾ ಮೊಮ್ಮಕ್ಕಳು ಪರಸ್ಪರರಿಗೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು. ಪ್ರಶಸ್ತಿ ಬರುವವರೆಗೂ ತುಂಬಾ ಕುತೂಹಲವಿತ್ತು. ಇನ್ನೂ ಆ ಗುಂಗಿನಿಂದ ಹೊರಬರಲು ಆಗಿಲ್ಲ. ಈ ಹಿಂದೆ ಸಿಕ್ಕ ಎಲ್ಲಾ ಪ್ರಶಸ್ತಿಗಳು ಕಾದಂಬರಿಗೆ ಹೆಚ್ಚು ಸಿಕ್ಕಿದ್ದವು. ಈ ಬಾರಿ ಆಯ್ದ ಕತೆಗಳಿಗೆ ಸಿಗುತ್ತೋ ಇಲ್ಲವೋ ಎಂಬ ಅನುಮಾನ ಇತ್ತು. ಈ ಬಾರಿ ಅನುಮಾನ ಮೀರಿ ನನ್ನ ತಾಯಿಯ ಕೃತಿಗೆ ಪ್ರಶಸ್ತಿ ಸಿಕ್ಕಿದೆ. ಇದು ನಮ್ಮ ನಾಡಿಗೆ ಹೆಮ್ಮೆಯ ವಿಚಾರವಾಗಿದೆ. ಬಾನು ಮುಷ್ತಾಕ್ ರವರು ಮೊದಲಿನಿಂದಲೂ ಸಾಹಿತ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಈ ಪ್ರಶಸ್ತಿ ಸಿಕ್ಕಿರುವುದು ನಮಗೆ ಸಂತಸ ತಂದಿದೆ ಎಂದ ಪುತ್ರ ತಾಹೀರ್ ಮುಷ್ತಾಕ್ ಸಂತೋಷವನ್ನು ಹಂಚಿಕೊಂಡರು.
ಸಿಎಂ ಸಿದ್ದರಾಮಯ್ಯ ಅಭಿನಂದನೆ
ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.
ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?:
ಲಾಂಗ್‌ಲಿಸ್ಟ್‌ನಲ್ಲಿರುವ 13 ಕೃತಿಗಳ ಪೈಕಿ 6 ಕೃತಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಿ ಏ.8ರಂದು ಘೋಷಿಸಲಾಗುತ್ತದೆ. ಈ ಸುತ್ತಿಗೆ ಆಯ್ಕೆಯಾದ ಪ್ರತಿ ಕೃತಿಗೆ 5,51,387 ರು. ಬಹುಮಾನ ಮೊತ್ತ ಸಿಗಲಿದೆ. ಇದು ಲೇಖಕ ಮತ್ತು ಅನುವಾದಕ ಇಬ್ಬರಿಗೂ ಹಂಚಿಕೆಯಾಗುತ್ತದೆ. ಎರಡನೇ ಸುತ್ತಿಗೆ ಆಯ್ಕೆಯಾದ 6 ಕೃತಿಗಳಲ್ಲಿ ಅಂತಿಮವಾಗಿ ಒಂದು ಕೃತಿಗೆ 2025ನೇ ಸಾಲಿನ ಬೂಕರ್‌ಪ್ರಶಸ್ತಿ ಘೋಷಿಸಲಾಗುತ್ತದೆ. ಮೇ 20ರಂದು ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯ ಘೋಷಣೆ ನಡೆಯಲಿದೆ. ವಿಜೇತ ಲೇಖಕರಿಗೆ ಮತ್ತು ಅನುವಾದಕರಿಗೆ ತಲಾ 27,58,110 ರು. ಬಹುಮಾನ ಸಿಗಲಿದೆ.