Cricket:10ಕ್ಕೆ 10 ಬ್ಯಾಟರ್‌ಗಳು ರಿಟೈರ್ಡ್ ಔಟ್: ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆ

ಕ್ರಿಕೆಟ್ ಲೋಕದಲ್ಲಿ (Cricket) ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುವುದನ್ನು ನೋಡುತ್ತೇವೆ. ಹೆಚ್ಚು ರನ್, ವೇಗದ ಶತಕ, ದುಬಾರಿ ಓವರ್ ಹೀಗೆ ನಾನಾ ರೀತಿಯ ದಾಖಲೆಗಳು ಕ್ರಿಕೆಟ್ ಲೋಕದಲ್ಲಿ ಅಚ್ಚಾಗುತ್ತದೆ.
ಆದರೆ ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ದಾಖಲೆಯೊಂದನ್ನು ತಂಡ ಬರೆದಿದೆ.
ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಅರ್ಹತಾ ಪಂದ್ಯದಲ್ಲಿ (ICC T20 World Cup Asia Qualifier) ವಿಲಕ್ಷಣ ಘಟನೆ ನಡೆದಿದೆ.
ಬ್ಯಾಂಕಾಕ್ನಲ್ಲಿ ನಡೆದ ಯುಎಇ – ಕತಾರ್ ನಡುವಿನ ಪಂದ್ಯ ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.
ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಯುಎಇ ಮಹಿಳಾ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಯುಎಇ 16 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 192 ರನ್ಗಳಿಸಿತು. ಆರಂಭಿಕರಾದ ಇಶಾ ರೋಹಿತ್ ಓಜಾ 55 ಎಸೆತಗಳಲ್ಲಿ 14 ಬೌಂಡರಿ, 5 ಸಿಕ್ಸರ್ಗಳ ಸಹಿತ 113 ರನ್ಗಳಿಸಿದರೆ, ಮತ್ತೊಬ್ಬ ಆಟಗಾರ್ತಿ ತೀರ್ಥ ಸತೀಶ್ 42 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ 74 ರನ್ಗಳಿಸಿದರು.
ಮಳೆಯ ಭೀತಿಯಿದ್ದ ಕಾರಣ ಯುಎಇ 16ನೇ ಓವರ್‌ನಲ್ಲೇ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರಕ್ಕೆ ಬಂದಿತ್ತು. ಆದರೆ ಟಿ20 ನಿಯಮದ ಪ್ರಕಾರ ಡಿಕ್ಲೇರ್ ಮಾಡುವಂತಿಲ್ಲ. ಈ ಕಾರಣದಿಂದ ಯುಎಇ ತಂಡ ರಿಟೈರ್ಡ್ ಔಟ್ ಆಗುವ ನಿರ್ಧಾರವನ್ನು ಮಾಡಿತು.
ಅದರಂತೆ ಆರಂಭಿಕ ಆಟಗಾರ್ತಿಯರ ಬಳಿಕ ಒಬ್ಬೊಬ್ಬ ಆಟಗಾರರು ಕ್ರೀಸ್‌ಗೆ ಬಂದು ರಿಟೈರ್ಡ್ ಔಟ್ ಆದರು. ಕ್ರಿಕೆಟ್ ಲೋಕದಲ್ಲೇ ಈ ರೀತಿ ಪಂದ್ಯವೊಂದರಲ್ಲಿ ಎಲ್ಲಾ ಆಟಗಾರರು ರಿಟೈರ್ಡ್ ಔಟ್ ಆದ ಮೊದಲ ನಿದರ್ಶನ ಇದಾಗಿದೆ.
ಯುಎಇ ಆಟಗಾರ್ತಿಯರು ಪ್ಯಾಡ್ ಕಟ್ಟಿಕೊಂಡು ಕ್ರೀಸ್‌ಗೆ ಬಂದು ರಿಟೈರ್ಡ್ ಔಟ್ ಆದರು. ಇನ್ನು 193ರ ಗುರಿಯನ್ನು ಬೆನ್ನಟ್ಟಿದ ಕತಾರ್ ತಂಡ 11.1 ಓವರ್‌ನಲ್ಲಿ 29 ರನ್ಗಳಿಗೆ ಆಲೌಟ್ ಆಗಿ. ಪಂದ್ಯವನ್ನು ಸೋತಿತು.
ಉತ್ತಮವಾಗಿ ಬೌಲಿಂಗ್ ಮಾಡಿದ ಯುಎಇ ಪರ ಮಿಚೆಲ್ ಬೋತಾ 11ಕ್ಕೆ3, ಕೇಟಿ ಥಾಮ್ಸನ್ 6ಕ್ಕೆ2 ವಿಕೆಟ್ ಪಡೆದರೆ ವೈಷ್ಣವಿ ಮಹೇಶ್, ಇಂಧುಜಾ ನಂದಕುಮಾರ್, ಇಶಾ ರೋಹಿತ್ ಹಾಗೂ ಹೀನಾ ತಲಾ 1 ವಿಕೆಟ್ ಪಡೆದರು.