ಇತ್ತೀಚಿನ ಸುದ್ದಿ

3 ದಿನಗಳ ಕಾಲ ನಡೆಯುವ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ: ನೀಡಿದ ಸಚಿವ ಜಮೀರ್ ಅಹ್ಮದ್ ,ನಟ ರಮೇಶ್‌ ಅರವಿಂದ್‌, ಪೂಜಾ ಗಾಂಧಿ, ಪ್ರೇಮಾ ಭಾಗಿ

ಹೊಸಪೇಟೆ : (ಎಂ.ಪಿ. ಪ್ರಕಾಶ್‌ ಪ್ರಧಾನ ವೇದಿಕೆ) (ಮಾ.01): ವಿಜಯನಗರದ ಗತವೈಭವ ಸಾರುವ 3 ದಿನಗಳ ಹಂಪಿ ಉತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ವಿಧ್ಯುಕ್ತ ಚಾಲನೆ ನೀಡಿದರು. ಈ ಮೂಲಕ ಹಂಪಿಯ 6 ವೇದಿಕೆಗಳಲ್ಲಿ ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.

ಚಿತ್ರನಟ ರಮೇಶ್‌ ಅರವಿಂದ ಮಾತನಾಡಿ, ಹಂಪಿ ಉತ್ಸವ ಈ ನಾಡಿನ ಕಲೆಯನ್ನು ಇಡೀ ಜಗತ್ತಿಗೆ ಸಾರುವ ಉತ್ಸವವಾಗಿದೆ. ಈ ನೆಲದಲ್ಲಿ ಈ ಹಿಂದೆ ಬಳ್ಳದಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡುತ್ತಿದ್ದರು.

ಕೋಟಿ ರು. ಖರ್ಚು ಮಾಡಿ ನಾವು ತೆಗೆದುಕೊಳ್ಳುವ ಕಾರುಗಳು 15 ವರ್ಷಕ್ಕೆ ಗುಜರಿ ಸೇರುತ್ತವೆ. 500 ವರ್ಷಗಳೇ ಕಳೆದರೂ ವಿಜಯ ವಿಠ್ಠಲ ದೇವಾಲಯದ ಆವರಣದ ಕಲ್ಲಿನ ತೇರು ಸ್ಮಾರಕ ಇನ್ನೂ ಗಟ್ಟಿಯಾಗಿದೆ. ಹಂಪಿ ಸ್ತಂಭಗಳಲ್ಲೂ ಸಪ್ತಸ್ವರದ ನಾದ ಹೊರಹೊಮ್ಮುತ್ತದೆ. ವಿಜಯನಗರದ ಆಳರಸರು ಈ ನಾಡಿನ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ಈ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಜತನದಿಂದ ಕಾಪಾಡಿಕೊಂಡು ಸಾಗೋಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಜಮೀರ್‌ ಅಹಮದ್‌ ಖಾನ್‌ ಮಾತನಾಡಿ, ವಿಜಯನಗರದ ನೆಲ ಐತಿಹಾಸಿಕ ನೆಲವಾಗಿದೆ. ಎಂ.ಪಿ. ಪ್ರಕಾಶ್‌ ಅವರು ಹಂಪಿ ಉತ್ಸವದ ರೂವಾರಿ ಆಗಿದ್ದಾರೆ. ಹಂಪಿ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದರು. ಉತ್ಸವದಲ್ಲಿ ಸಚಿವ ಶಿವರಾಜ್‌ ತಂಗಡಗಿ, ಚಿತ್ರನಟಿ ಪ್ರೇಮಾ, ಶಾಸಕ ಎಚ್‌.ಆರ್‌.ಗವಿಯಪ್ಪ, ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಸಂಸದ ರಾಜಶೇಖರ್‌ ಹಿಟ್ನಾಳ, ನಟಿ ಪೂಜಾ ಗಾಂಧಿ ಮತ್ತಿತರರಿದ್ದರು.

ಉತ್ಸವದ ಅಂದ ಹೆಚ್ಚಿಸಿದ ಅಂಧ ಕಲಾವಿದರ ಗೀತಗಾಯನ, ನೃತ್ಯ: ವಿಶ್ವ ವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಶ್ರೀ ವಿರೂಪಾಕ್ಷೇಶ್ವರ ವೇದಿಕೆಯಲ್ಲಿ ಶುಕ್ರವಾರ ಸಂಜೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಹೊಸಪೇಟೆ ಸೇವಿಯರ್ ಸೇವಾ ಸಮಿತಿಯ ಅಂಧ ಕಲಾವಿದರಿಂದ ಪ್ರಸ್ತುತಗೊಳಿಸಿದ ಗೀತಗಾಯನ ಹಾಗೂ ಭರತನಾಟ್ಯ ಉತ್ಸವದ ಅಂದ ಹೆಚ್ಚಿಸಿತು. ಬಳ್ಳಾರಿ, ವಿಜಯನಗರ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿ ತಮ್ಮ ಕಲೆಯನ್ನು ಪ್ರಸ್ತುತಪಡಿಸಿದರು.

ಮರಿಯಮ್ಮನಹಳ್ಳಿಯ ಅಣಮಯ್ಯ ಮತ್ತು ತಂಡದವರಿಂದ ‘ಕೇಳೋ ಜಾಣ ಶಿವಜ್ಞಾನ ಮಾಡಣ್ಣ, ನಿನ್ನೊಳಗ ನೀನು ತಿಳಿದು ನೋಡಣ್ಣ’, ‘ಉತ್ತುಂಗ ನಾಡಿನಿಂದ ಒಂದು ಹುಡುಗಿ ಬಂದಾಳವ್ವ’, ‘ತರವಲ್ಲ ತಗಿ ನಿನ್ನ ತಂಬೂರಿ’ ಹೀಗೆ ಹಲವು ಜಾನಪದ ಗಾಯನಗಳನ್ನು ಪ್ರಸ್ತುತಪಡಿಸುವ ಮೂಲಕ ಸಂಗೀತ ರಸದೌತಣ ಉಣಬಡಿಸಿದರು. ಹರಪನಹಳ್ಳಿಯ ಬಸವನಾಳು ಗ್ರಾಮದ ನೈಪುಣ್ಯ ಟ್ರಸ್ಟ್‌ನ ಕಲಾವಿದರಿಂದ “ದ್ರೋಣಾಚಾರ್ಯ ಮತ್ತು ಏಕಲವ್ಯ ಬಿಲ್ವಿದ್ಯೆ” ಕುರಿತು ಯಕ್ಷಗಾನ ಪ್ರದರ್ಶಿಸಿದರು.

ಕೂಡ್ಲಿಗಿ ತಾಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ಶ್ರೀರಾಮ ಭಜನಾ ಮಂಡಳಿ ವತಿಯಿಂದ “ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯ”, “ತೊರೆದು ಜೀವಿಸಬಹುದೇ ಹರಿ ನಿನ್ನ ನಾಮಸ್ಮರಣೆ” ಎಂಬ ಭಜನೆ ಗೀತೆ ಪ್ರಸ್ತುತಪಡಿಸಿದರು. ಬೆಂಗಳೂರಿನ ಅಪರ್ಣ ನಾತು ಮತ್ತು ತಂಡದವರು ‘ಶ್ರಾವಣ ಬಂತು-ಶ್ರಾವಣ’ ಬಂತು ಎಂಬ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಶಿಕ್ಷಣದ ಜತೆಗೆ ರಕ್ಷಣೆಯೂ ಅಗತ್ಯ ಎಂಬಂತೆ, ಕೊಪ್ಪಳದ ಅಗಸ್ತ್ಯ ಅರಕೇರಿ ಎಂಬ ಪುಟ್ಟ ಬಾಲಕ ಸ್ವಯಂ ರಕ್ಷಣೆ ಕುರಿತ ತೋರ್ಪಡಿಸಿದ ಪ್ರದರ್ಶನ ನೆರೆದಿದ್ದವರನ್ನು ಆಶ್ಚರ್ಯಗೊಳಿಸಿತು.

ವರದಿ ಹಾಗು ಮಾಹಿತಿ: C ಕೊಟ್ರೇಶ್ tv8kannada ಹೊಸಪೇಟೆ

Related Articles

Leave a Reply

Your email address will not be published. Required fields are marked *

Back to top button