ಇತ್ತೀಚಿನ ಸುದ್ದಿ

ನ.23ರಂದು ‘ಅಭ್ಯಾಸಿ ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಪ್ರಧಾನ ಸಮಾರಂಭ

ಚಾಮರಾಜನಗರ: ಅಭ್ಯಾಸಿ ಟ್ರಸ್ಟ್ ಸಂಸ್ಥೆಯು ಅಭ್ಯಾಸಿ ಕನ್ನಡ ಹಬ್ಬ ಮತ್ತು ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.23 ಶನಿವಾರದಂದು ಸಂಜೆ 4 ಗಂಟೆಗೆ ವರನಟ ಡಾ. ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿರಣ್ ಗಿಗಿ೯ ತಿಳಿಸಿದರು.


ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ವರ್ಷದಿಂದ ಅಭ್ಯಾಸಿ ಕನ್ನಡ ಹಬ್ಬ ಎಂಬ ಹೆಸರಿನ ಕಾರ್ಯಕ್ರಮವನ್ನು ರೂಪಿಸಿ, ವಿವಿಧ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿರುವ 60 ವರ್ಷ ಮೇಲ್ಪಟ್ಟ ಹಿರಿಯ ಸಾಧಕರನ್ನು ಸಂಸ್ಥೆಯು ಗುರುತಿಸಿ “ಅಭ್ಯಾಸಿ ಶ್ರೇಷ್ಠ ಕನ್ನಡಿಗ ಪ್ರಶಸ್ತಿ”ಯನ್ನು ಕೊಡಲಾಗುತ್ತಿದೆ. ಪ್ರಶಸ್ತಿಯು 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಪ್ರಥಮವಾಗಿ ಚಾಮರಾಜನಗರ ಜಿಲ್ಲೆಯ ಸಂಗೀತ ವಿದ್ವಾಂಸರು ಹಾಗೂ ಗ್ರಾಮೀಣ ರಂಗಭೂಮಿ ನಿರ್ದೇಶಕರಾದ ಜೆ. ಜಾಯ್‌ಫುಲ್‌ ಜಯಶೇಖರ್‌ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಅಭ್ಯಾಸಿ ಕನ್ನಡ ಹಬ್ಬವನ್ನು ಮೈಸೂರು ರಂಗಾಯಣದ ಹಿರಿಯ ರಂಗನಟರು ಹಾಗೂ ರಂಗ ನಿರ್ದೇಶಕ ಹುಲುಗಪ್ಪ ಕಟ್ಟೀಮನಿಯವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ.ಮಂಜುನಾಥ ಪ್ರಸನ್ನ ಅವರು ವಹಿಸಲಿದ್ದಾರೆ. ಮೈಸೂರಿನ ನಿನಾದ್‌ ಮ್ಯೂಸಿಕಲ್‌ ಟ್ರಸ್ಟ್‌ ಸಂಸ್ಥಾಪಕ ಹಾಗೂ ಸಂಗೀತ ನಿರ್ದೇಶಕ ಎ.ಎಸ್. ಪ್ರಸನ್ನಕುಮಾರ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಎಸ್.ವಿ.ಪ್ರತಿಷ್ಠಾನದ ಬಿ.ವಿ.ವೆಂಕಟನಾಗಪ್ಪಶೆಟ್ಟಿ, ವಕೀಲರಾದ ಪುಟ್ಟಸ್ವಾಮಿ ರಾಮಸಮುದ್ರ, ಸಾಹಿತಿ ಕೆ.ಶ್ರೀಧರ್‌ ಹಾಗೂ ಅಭ್ಯಾಸಿ ಟ್ರಸ್ಟ್‌ ಅಧ್ಯಕ್ಷ ಕಿರಣ್‌ ಗಿರ್ಗಿ ವೇದಿಕೆಯಲ್ಲಿರುತ್ತಾರೆ.


ಅಭ್ಯಾಸಿ ಟ್ರಸ್ಟ್‌ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ, ಕೀಬೋರ್ಡ್‌ ವಾದ್ಯಸಂಗೀತ, ಡಾ.ಎಂ.ಎಸ್.ಮೂರ್ತಿ ಅವರ ಯಶೋಧರೆ ಮಲಗಿರಲಿಲ್ಲ ನಾಟಕ ಮತ್ತು ಮಂಜು ಕೋಡಿ ಉಗನೆ ರವರ ಕಂಡಾಯದ ಕೋಳಿ ನಾಟಕ ಪ್ರದರ್ಶನಗಳು ಇರುತ್ತವೆ. ನಿರೂಪಣೆ ಕಲೆ ನಟರಾಜ್‌, ಗಾಯನ ಎಸ್.ಜಿ.ಮಹಾಲಿಂಗ್‌ ಗಿರ್ಗಿ, ಕೊಂಬು ಕಹಳೆ ರವಿಚಂದ್ರಪ್ರಸಾದ್‌, ಸಂಗೀತ ಸಾಂಗತ್ಯ ಕೃಷ್ಣ ಚೈತನ್ಯ, ಪ್ರಸಾಧನ ಬೆಳಕು ರಂಗನಾಥ ವಿ., ರಂಗಪರಿಕರ ಮಧುಸೂದನ್‌ ಹೊಸೂರು, ಸಂಗೀತ ಮತ್ತು ನಿರ್ದೇಶನ ಕಿರಣ್‌ ಗಿರ್ಗಿ ಮಾಡಲಿದ್ದಾರೆ. ಪ್ರವೇಶ ಉಚಿತವಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಹಕಾರ ನೀಡಬೇಕು ಎಂದು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ನಂದಿನಿ ರವಿಕುಮಾರ್, ಹಿರಿಯ ರಂಗಭೂಮಿ ಕಲಾವಿದ ಮಿಮಿಕ್ರಿ ಮಲ್ಲಣ್ಣ, ಕೊಂಬು ಕಹಳೆ ರವಿಚಂದ್ರಪ್ರಸಾದ್ ಇದ್ದರು.


ವರದಿ:ಇರಸವಾಡಿ ಸಿದ್ದಪ್ಪಾಜಿ tv8kannda ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button