ನೀಟ್ ಪರೀಕ್ಷೆಯಲ್ಲೂ ಜನಿವಾರ ತೆಗೆಸಿದ ಸಿಬ್ಬಂದಿ; ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ : ಇತ್ತೀಚೆಗಷ್ಟೆ ಭಾರೀ ವಿವಾದ ಹುಟ್ಟುಹಾಕಿದ್ದ ಸಿಇಟಿ ಬರೆಯಲು ಬಂದಿದ್ದ ಅಭ್ಯರ್ಥಿಗಳಿಂದ ಜನಿವಾರ ತೆಗೆಸಿದ್ದ ಪ್ರಕರಣ ಇನ್ನೂ ಚಾಲ್ತಿಯಲ್ಲಿರುವಾಗಲೇ ಇದೀಗ ನೀಟ್ ಪರೀಕ್ಷೆಯಲ್ಲೂ ಸಹ ಇಂತಹದ್ದೇ ಘಟನೆ ಮರುಕಳಿಸಿದೆ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿಯ ಸೇಂಟ್ ಮೇರಿ ಶಾಲೆಯಲ್ಲಿ ನಡೆದ ನೀಟ್ ಪರೀಕ್ಷೆ ವೇಳೆ ಶ್ರೀಪಾದ್ ಪಾಟೀಲ್ ಎಂಬ ಅಭ್ಯರ್ಥಿಯ ಜನಿವಾರ ತೆಗೆಸಿದ ಆರೋಪ ಸದ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕೇಳಿಬಂದಿದೆ.
ಸೆಂಟ್ ಮೇರಿ ಶಾಲೆಯಲ್ಲಿ ಕಡ್ಡಾಯವಾಗಿ ಜನಿವಾರವನ್ನು ತೆಗೆಯಲೇಬೇಕೆಂದು ಅಧಿಕಾರಿಗಳು ಒತ್ತಾಯಿಸಿದರು ಎಂದು ಹೇಳಲಾಗಿದೆ.
ಶ್ರೀಪಾದ್ ಪಾಟೀಲ್ ಪರೀಕ್ಷೆ ಬರೆಯಲು ಬಂದಾಗ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಿದ್ದು ಶ್ರೀಪಾದ್ ಅಧಿಕಾರಿಗಳ ಒತ್ತಡಕ್ಕೆ ಮಣಿದು ಜನಿವಾರ ಕಳಚಿ ಪರೀಕ್ಷೆ ಬರೆದಿದ್ದಾರೆ.
ಈ ಆರೋಪದ ಕುರಿತು ಬ್ರಾಹ್ಮಣ ಸಮುದಾಯದ ಸಂಘಟನೆಗಳು ಸೇಂಟ್ ಮೇರಿ ಶಾಲೆ ಎದುರು ಪ್ರತಿಭಟನೆ ನಡೆಸಿ ಕೃತ್ಯ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
