ಮೈಸೂರು ದಸರಾ; ಮರದ ಅಂಬಾರಿ ಹೊತ್ತು ಅರ್ಜುನನ ಅಭ್ಯಾಸ
ಮೈಸೂರು, ಅಕ್ಟೋಬರ್ 01; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಮಹೋತ್ಸ 2021ರ ಸಂಭ್ರಮ ಕಳೆಕಟ್ಟಿದ್ದುದೆ. ನಾಡಹಬ್ಬಕ್ಕೆ ಸಿದ್ಧತೆ ಶುರುವಾಗಿರುವ ಬೆನ್ನಲ್ಲೇ ದಸರಾ ಗಜಪಡೆಗೆ ಶುಕ್ರವಾರದಿಂದ ಅಂತಿಮ ಹಂತದ ತಾಲೀಮು ನಡೆಸಲಾಗುತ್ತಿದೆ.
ಈಗಾಗಲೇ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಸಾರಥಿ ಅಭಿಮನ್ಯು ಹಾಗೂ ಇತರ ಆನೆಗಳಿಗೆ ವಿವಿಧ ತಾಲೀಮು ನೀಡುವ ಮೂಲಕ ದಸರೆಗೆ ಸಿದ್ಧಗೊಳಿಸಲಾಗುತ್ತಿದೆ. ಇದರ ನಡುವೆ ಗಜಪಡೆ ಕ್ಯಾಪ್ಟನ್ ಅಭಿಮನ್ಯುಗೆ ಶುಕ್ರವಾರ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಯಿತು.
ಅರಮನೆ ಅಂಗಳದಲ್ಲಿ ಮರದ ಅಂಬಾರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಡಿಸಿಎಫ್ ಕರಿಕಾಳನ್ ಹಾಗೂ ಸಿಬ್ಬಂದಿ, ನಂತರ ಮರದ ಅಂಬಾರಿ ತಾಲೀಮು ನಡೆಸಿದರು. ಅಕ್ಟೋಬರ್ 15ರಂದು ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ ನಡೆಯಲಿದೆ.
ಚಿನ್ನದ ಅಂಬಾರಿ ಮಾದರಿಯ ಮರದ ಅಂಬಾರಿ ಜೊತೆಗೆ ಮರಳು ಮೂಟೆಗಳನ್ನು ಹೊತ್ತು ಸಾಗಿದ ಅಭಿಮನ್ಯು ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆಜಿ ತೂಕದ ಅಂಬಾರಿ ಹೊರಲು ತಾನು ಸಂಪೂರ್ಣ ಸಿದ್ಧನಾಗಿದ್ದೇನೆ ಅನ್ನೋದನ್ನ ಸಾಬೀತುಪಡಿಸಿದ.
ಅರಮನೆ ಆವರಣದಲ್ಲಿ ನಡೆದ ತಾಲೀಮಿನಲ್ಲಿ ಅಭಿಮನ್ಯು ಜೊತೆ ಕಾವೇರಿ, ಚೈತ್ರಾ, ಲಕ್ಷ್ಮಿ, ಗೋಪಾಲಸ್ವಾಮಿ, ಧನಂಜಯ, ಅಶ್ವತ್ಥಾಮ ಹಾಗೂ ವಿಕ್ರಮ ಆನೆಗಳು ಇದ್ದವು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಗಜಪಡೆಗೆ ಫಲ ತಾಂಬೂಲ ನೀಡಿ ಪುಷ್ಪಾರ್ಚನೆ ನೆರವೇರಿಸಿದರು.
ದಸರಾ ವೆಬ್‌ಸೈಟ್‌ಗೆ ಚಾಲನೆ ಮೈಸೂರು ದಸರಾ ವೆಬ್‌ಸೈಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ ನೀಡಿದರು. ದಸರಾ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸುವ ವೆಬ್‌ಸೈಟ್ ಇದಾಗಿದ್ದು, ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಹಿನ್ನೆಲೆ ವರ್ಚುವಲ್ ಹಾಗೂ ನೇರ ಪ್ರಸಾರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.
ಪ್ರಮುಖವಾಗಿ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ನಂದಿಪೂಜೆ, ಜಂಬೂ ಸವಾರಿ ಮೆರವಣಿಗೆ ನೇರ ಪ್ರಸಾರವನ್ನು ಸಹ ವೆಬ್‌ಸೈಟ್ ಮೂಲಕ ವೀಕ್ಷಿಸಬಹುದಾಗಿದೆ. ಅಲ್ಲದೇ ದಸರಾ ಕಾರ್ಯಕ್ರಮಗಳ ವಿವರ, ವೇಳಾಪಟ್ಟಿ, ಉಪಸಮಿತಿ ವಿವರ, ಛಾಯಾಚಿತ್ರಗಳು, ಮಾಹಿತಿಗಳು ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ದೊರೆಯಲಿದೆ.
ಅಲ್ಲದೇ ದಸರಾ ಉದ್ಘಾಟಕರ ಪರಿಚಯ, ಉಪಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಫೋಟೋ, ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್ ಒಳಗೊಂಡಿರಲಿದೆ. ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೂಡ ಮಾಹಿತಿ ಪ್ರಕಟಿಸಲಾಗಿದೆ.
ಕಾವಾಡಿಗರು, ಮಾವುತರೊಂದಿಗೆ ಉಪಹಾರ; ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹಾಗೂ ಇತರರು ಗಜಪಡೆ ಮಾವುತರು ಹಾಗೂ ಕಾವಾಡಿಗರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿದರು. ಕಾವಾಡಿಗರು ಹಾಗೂ ಮಾವುತರಿಗೆ ಸ್ವತಃ ಸಚಿವರೇ ಉಪಹಾರ ಬಡಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿ, ಯೋಗಕ್ಷೇಮ ವಿಚಾರಿಸಿದರು.