ಕಟ್ಟಿಗೆಯಿಂದ ಹೊಡೆದು ಮೂವರು ಹೆಣ್ಣು ಮಕ್ಕಳ ಕೊಲೆ..!
ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆ ಮೂವರು ಹೆಣ್ಣು ಮಕ್ಕಳ ಕೊಲೆಯಾಗಿರುವ ಘಟನೆ ನಡೆದಿದೆ. 45 ವರ್ಷದ ಸಂತೋಷಿ, 25 ವರ್ಷದ ವೈಷ್ಣವಿ, 16 ವರ್ಷದ ಆರತಿ ಕೊಲೆಯಾದ ಹೆಣ್ಣು ಮಕ್ಕಳು. ನಗರ್ ಹೊರವಲಯದ ಯಮರಸ್ ಕ್ಯಾಂಪಸ್ ನಲ್ಲಿ ಈ ಘಟನೆ ನಡೆದಿದೆ.
ವೈಷ್ಣವಿ ಪತಿಯೇ ಈ ಕೊಲೆ ಮಾಡಿರಬಹುದೆಂದು ಅಕ್ಕಪಕ್ಕದವರ ಅನುಮಾನವಾಗಿದೆ. ಇನ್ನು ಈ ಘಟನೆ ನಿನ್ನೆ ರಾತ್ರಿ ನಡೆದಿದ್ದು, ಬೆಳಗ್ಗೆ ಬೆಳಕಿಗೆ ಬಂದಿದೆ. ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಈ ಘಟನೆಗೆ ಗಂಡ ಹೆಂಡತಿ ಜಗಳವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಸಾಯಿ ಹಾಗೂ ವೈಷ್ಣವಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದೆ. ಹೈದ್ರಬಾದ್ ನಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದನಂತೆ. ಕುಡಿತದ ಚಟಕ್ಕೆ ಬಿದ್ದಿದ್ದವನು ಹೆಂಡತಿ ಹಾಗೂ ಮನೆಯವರಿಗೆ ಕಿರುಕುಳ ನೀಡುತ್ತಿದ್ದನಂತೆ.
ಗಂಡ ಹೆಂಡತಿಯ ನಡುವೆ ಆಗಾಗ ಜಗಳಗಳು ನಡೆಯುತ್ತಲೆ ಇತ್ತಂತೆ. ತವರು ಮನೆಗೆ ಬಂದಿದ್ದ ವೈಷ್ಣವಿ ನೋಡಲು ನಿನ್ನೆ ಸಾಯಿ ಕೂಡ ಅತ್ತೆ ಮನೆಗೆ ಬಂದಿದ್ದಾನೆ. ಈ ವೇಳೆಯೂ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆಂದು ಅನುಮಾನ ವ್ಯಕ್ತವಾಗಿದೆ.