ಇತ್ತೀಚಿನ ಸುದ್ದಿ

ವಿವಿಧ ಗ್ರಾಮ ಪಂಚಾಯತಿಗೆ ಕೇಂದ್ರ ತಂಡ ಭೇಟಿನರೇಗಾ ಯೋಜನೆಯ ಕಡತಗಳ ಪರಿಶೀಲನೆ / ಕೂಲಿಕಾರರೊಂದಿಗೆ ಸಂವಾದ

ಮಸ್ಕಿ : ತಾಲೂಕಿನ ಮೆದಕಿನಾಳ, ಅಂಕುಶದೊಡ್ಡಿ ಗ್ರಾಮ ಪಂಚಾಯತಿಗೆ ಗುರುವಾರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನಿರ್ದೇಶಕರಾದ ಪಿ. ಶಿವಶಂಕರ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸಿತು.
ಮೆದಕಿನಾಳ ಗ್ರಾಪಂಯ ಅಂತರಗಂಗಿ ಗ್ರಾಮದ ಮುಖ್ಯ ರಸ್ತೆಯ ಬದಿ ಹಳ್ಳ ಹೂಳು ಎತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕೂಲಿಕಾರರೊಂದಿಗೆ ಸಂವಾದ ನಡೆಸಿದರು. ಸರ್ಕಾರ ನಿಗದಿಪಡಿಸಿದ ಕೂಲಿ ಮೊತ್ತ, ಕೆಲಸದ ಅವಧಿ, ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಒದಗಿಸುವ ನೆರಳು, ಕುಡಿಯುವ ನೀರಿನ ವ್ಯವಸ್ಥೆ ಕುರಿತು ಕೂಲಿಕಾರರೊಂದಿಗೆ ಮಾಹಿತಿ ಪಡೆದರು. ಹಿರಿಯ ಕೂಲಿಕಾರರೊಂದಿಗೆ ಮಾತನಾಡಿ, ಮನೆಯಲ್ಲಿರುವ ಸದಸ್ಯರ ಸಂಖ್ಯೆ, ಸರ್ಕಾರ ನಿಗದಿಪಡಿಸಿದ ಕೂಲಿ ಮೊತ್ತ, ನರೇಗಾ ಕೂಲಿಯನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದರ ಕುರಿತು ಮಾಹಿತಿ ಪಡೆದರು. ಕೂಲಿ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದನ್ನು ಖಾತ್ರಿಪಡಿಸಿಕೊಂಡರು.


ಎನ್ಎಂಆರ್ ಗಳನ್ನು ಪರಿಶೀಲಿಸಿ, ಎನ್ಎಂಎಂಎಸ್ ತಂತ್ರಾಂಶದಲ್ಲಿ ಕೂಲಿಕಾರರ ಹಾಜರಾತಿ ದಾಖಲಿಸುವುದನ್ನು ವೀಕ್ಷಿಸಿದರು. ಹಳ್ಳದಲ್ಲಿ ಅಳವಡಿಸಿದ ಕಾಮಗಾರಿಯ ನಾಮ ಫಲಕ ವೀಕ್ಷಿಸಿ, ಕೂಲಿಕಾರರು ತೆರವುಗೊಳಿಸಿದ ಹೂಳಿನ ಪ್ರಮಾಣವನ್ನು ಖುದ್ದಾಗಿ ಅಳತೆ ಮಾಡಿದರು.
ತದ ನಂತರ ಅಂಕುಶದೊಡ್ಡಿ ಗ್ರಾಮದ ಕೆರೆಗೆ ಭೇಟಿ ನೀಡಿ ಕೂಲಿಕಾರರು ಹೂಳು ತೆರವುಗೊಳಿಸಿರುವುದನ್ನು ವೀಕ್ಷಿಸಿದರು.‌ ತದ ನಂತರ ಮೆದಕಿನಾಳ ಗ್ರಾಮ ಪಂಚಾಯತಿಯ ಬೈಲುಗುಡ್ಡ ಗ್ರಾಮದ ಹೊರ ವಲಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿ‌ಂದ ಅಭಿವೃದ್ಧಿಪಡಿಸಿದ ನೆಡು ತೋಪು ವೀಕ್ಷಿಸಿದರು. ಬೈಲುಗುಡ್ಡ ಗ್ರಾಮದಲ್ಲಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡ ಫಲಾನುಭವಿ ಭೀಮಮ್ಮ ಅವರೊಂದಿಗೆ ಮಾತನಾಡಿ ಕುಟುಂಬದ ಮಾಹಿತಿ ಪಡೆದರು.
ಈ ವೇಳೆ ಕೇಂದ್ರದ ಯೋಜನಾ ಅಧಿಕಾರಿ ಅವನೀಂದ್ರ, ಗ್ರಾಮೀಣ ನಿರ್ವಹಣೆಯ ಸಿ.ವಿ. ಬಾಲಮುರುಳಿ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕರಾದ ಶರಣ ಬಸವರಾಜ ಕೆಸರಟ್ಟಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್, ಪಿಆರ್ ಇಡಿ ಎಇಇ ಹನುಮಂತಪ್ಪ ಅಡವಾಣಿ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶಿವಾನಂದರಡ್ಡಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ತಿಮ್ಮಣ್ಣ, ಶಾಂತಪ್ಪ, ಸಾಮಾಜಿಕ ಅರಣ್ಯ ಇಲಾಖೆಯ ಆರ್ ಎಫ್ ಒ ಭೀಮರಾಯ, ಡಿಆರ್ ಎಫ್ ಒ ವಿಜಯಕುಮಾರ್, ತಾಂತ್ರಿಕ ಸಂಯೋಜಕರಾದ ಅಶೋಕ್, ತಾಂತ್ರಿಕ ಸಹಾಯಕ ಅಭಿಯಂತರರಾದ ಪಂಪಣ್ಣ, ಸೋಮಶೇಖರ್ , ಶಿವ ಕುಮಾರ ಯಾದವ್, ವೆಂಕಟೇಶ್, ಸಿಬ್ಬಂದಿ ಇದ್ದರು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button