ಇತ್ತೀಚಿನ ಸುದ್ದಿ

ನಗರದಲ್ಲಿ ನೂತನ ಆರೋಗ್ಯ ಮಂದಿರ ಚಿಕಿತ್ಸಾಲಯಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಚಾಲನೆ

ಚಾಮರಾಜನಗರ, ಏ.21: ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಕ್ಕದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆರೋಗ್ಯ ಮಂದಿರದ ಟೇಪ್ ಕತ್ತರಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆರೋಗ್ಯ ಮಂದಿರದ ಒಳಾಂಗಣದಲ್ಲಿರುವ ಔಷಧಿ ವಿತರಣಾ ಕೇಂದ್ರ, ಚಿಕಿತ್ಸಾ ಕೊಠಡಿ, ತುರ್ತು ಚಿಕಿತ್ಸಾ ವಿಭಾಗ, ರಕ್ತ ಸಂಗ್ರಹಣ ಕೇಂದ್ರ, ನಿರೀಕ್ಷಣಾಲಯ ಹಾಗೂ ಪ್ರಯೋಗಾಲಯವನ್ನು ವೀಕ್ಷಿಸಿ, ಆರೋಗ್ಯ ಇಲಾಖೆ ಚಿಕಿತ್ಸಾಲಯದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಜಿಲ್ಲಾಡಳಿತ ಭವನದ 3ನೇ ಮಹಡಿಯಲ್ಲಿ ಜಿ.ಪಂ.ನ ಲಿಂಕ್ ಡಾಕುಮೆಂಟ್ ಅನುದಾನದಲ್ಲಿ ನೂತನವಾಗಿ ನವೀಕರಿಸಲಾಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಜಿಲ್ಲಾಡಳಿತ ಭವನದ ಕ್ಯಾಂಪಸ್‍ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ, ತಾತ್ಕಾಲಿಕವಾಗಿ ಆರೋಗ್ಯ ಸೇವೆ ನೀಡಿ ನೆರವಾಗುವ ಹಿತದೃಷ್ಠಿಯಿಂದ ಆರೋಗ್ಯ ಮಂದಿರ ತೆರೆಯಲಾಗಿದೆ. ಖಾಸಗಿ ಕ್ಲಿನಿಕ್‍ಗಿಂತಲೂ ವ್ಯವಸ್ಥಿತ ಮಾದರಿಯಲ್ಲಿ ರೂಪಿತವಾಗಿರುವ ಆರೋಗ್ಯ ಮಂದಿರದಲ್ಲಿ ದೊರೆಯುವ ಸೌಲಭ್ಯಗಳನ್ನು ಜಿಲ್ಲಾಡಳಿತ ಭವನದ ಅಧಿಕಾರಿ ಸಿಬ್ಬಂದಿಗಳು ಸದ್ಭಳಕೆ ಮಾಡಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಲಭಿಸುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಲಾಖೆಯ ವೈದ್ಯರು, ಶುಶ್ರೂಷಕರು, ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರ ಶ್ರಮವೇ ಇದಕ್ಕೆ ಕಾರಣವಾಗಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಕೊರತೆಯೂ ಸಾಕಷ್ಟಿದೆ. ಇಂತಹ ಕೊರತೆಗಳ ನಡುವೆಯು ಆರೋಗ್ಯ ಇಲಾಖೆಯು ಜಿಲ್ಲೆಯ ನಗರ, ಪಟ್ಟಣಗಳು ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಳೆದ ವರ್ಷ ಕೊಳ್ಳೇಗಾಲದಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ 12 ಸಾವಿರ ಜನರು ಚಿಕಿತ್ಸಾ ಸೌಲಭ್ಯ ಪಡೆದಿದ್ದಾರೆ. ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ ಮುಂಚೂಣಿಗೆ ಬರಲು ಜನರಿಗೆ ಪೂರಕ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಡಿಎಚ್ಒ ಡಾ. ಎಸ್. ಚಿದಂಬರ ಇತರರಿದ್ದರು.

ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ

Related Articles

Leave a Reply

Your email address will not be published. Required fields are marked *

Back to top button