ಬೆಳ್ಳಿಗನೂರು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮಸ್ಕಿ : ತಾಲೂಕಿನ ಬೆಳ್ಳಿಗನೂರ ಗ್ರಾಮದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಆಚರಿಸಲಾಯಿತು.
ದಲಿತ ಮುಖಂಡರಾದ ವಂದೇಲಪ್ಪ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ ಮಹಾಪುರುಷರು. ದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ದನಿ ಎತ್ತಿದರು ಎಂದರು.
ಶೋಷಣೆ ಮತ್ತು ತುಳಿತಕ್ಕೊಳಗಾದವರಿಗೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಮಾನತೆಯನ್ನು ಸಾರಿದರು. ಇಂತಹ ಮಹಾ ಪುರುಷರ ಜಯಂತಿಯನ್ನು ಆಚರಣೆ ಮಾಡುತ್ತಿರುವು ನಾವೆಲ್ಲರು ಪುಣ್ಯವಂತರು. ಅವರ ನೀಡಿರುವ ಮೀಸಲಾತಿಯ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ರಮೇಶ ಮಾತನಾಡಿ, ಅಂಬೇಡ್ಕರರು ಶೋಷಣೆಗೊಳಗಾದ ಪ್ರತಿಯೊಬ್ಬರಿಗೂ ನ್ಯಾಯ ಕಲ್ಪಿಸುವ ಜೊತೆಗೆ ಸಮಾನತೆ ಬಯಸಿದ ಮೇರು ವ್ಯಕ್ತಿತ್ವಯುಳ್ಳ ನಾಯಕರು ಎಂದು ಬಣ್ಣಿಸಿದರು.
ಈ ವೇಳೆ ವಂದೇಲಪ್ಪ, ರಮೇಶ, ಸಿದ್ದಯ್ಯ ಸ್ವಾಮಿ, ಕೆಂಚಣ್ಣ ಏರಡ್ಡಿ, ಮರಿಯಪ್ಪ, ಬೀರಪ್ಪ, ಪಂಪಾಪತಿ ಗದ್ದಿ,ಅಂಬರೀಶ್, ಮೌನೇಶ, ಹನುಮಂತ, ರಮೇಶ್, ನಾಗಪ್ಪ ಇನ್ನಿತರರು ಸೇರಿದಂತೆ ದಲಿತ ಮುಖಂಡರು,ಗ್ರಾಮದ ಯುವಕರು ಇದ್ದರು.