ಕ್ರೀಡೆ

IPL -2025 RCBvsDC: ಆರ್‌ಸಿಬಿ ಸೋಲಿಗೆ ತಾಳಿ ಕಟ್ಟಿದ ಕರಿಮಣಿ ಮಾಲೀಕ ರಾಹುಲ್ಲ!

ಬೆಂಗಳೂರು : ನಮ್ಮೂರ ಹುಡುಗ. ಆಡುತ್ತಿರುವುದು ಉತ್ತರದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ. ಅದೂ ನಮ್ಮೂರ ಸ್ಟೇಡಿಯಂನಲ್ಲಿ. ಬಹುಶಃ ಡೆಲ್ಲಿ ಟೀಮ್‌ನ ಬೇರೆ ಯಾರಾದರೂ ಆಡಿ ಡೆಲ್ಲಿ ಗೆದ್ದಿದ್ದರೆ ಆರ್‌ಸಿಬಿ ಅಭಿಮಾನಿಗಳಿಗೆ ಇಷ್ಟು ಸಂಕಟವಾಗುತ್ತಿರಲಿಲ್ಲ. ನಮ್ಮೂರಿನ ಹುಡುಗ, ನಮ್ಮ ಆರ್‌ಸಿಬಿಯಲ್ಲೇ ಅರಳಿದ ಆಟಗಾರ ಡೆಲ್ಲಿ ತಂಡದ ಪರವಾಗಿ ಆಡಿ ಆರ್‌ಸಿಬಿಯನ್ನು ಬೆಂಗಳೂರಿನಲ್ಲೇ ಸೋಲಿಸಿದ ಅನ್ನೋದನ್ನ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಹಾಗಾಗಿ ಆರ್‌ಸಿಬಿ ಅಭಿಮಾನಿಗಳ ಬಾಯಲ್ಲಿ ‘ಕರಿಮಣಿ ಮಾಲೀಕ ರಾಹುಲ್ಲ..’ ಅನ್ನೋ ಟ್ರೆಂಡಿಂಗ್‌ ಹಾಡೇ ಗುನುಗುತ್ತಿರುತ್ತದೆ.

ಕಳೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಮುಂಬೈನಲ್ಲಿಯೇ ಸೋಲಿಸಿದ ವಿಶ್ವಾಸದಲ್ಲಿದ್ದ ಆರ್‌ಸಿಬಿ ಈಗ ತವರಿನ ಸ್ಟೇಡಿಯಂನಲ್ಲೇ ಸೋಲಿನ ಪಾತಾಳಕ್ಕೆ ಇಳಿದಿದೆ. ಅದಕ್ಕೆ ಕಾರಣವಾಗಿದ್ದು ಕರ್ನಾಟಕದ ಆಟಗಾರ ಕೆಎಲ್‌ ರಾಹುಲ್. 164 ರನ್‌ಗಳ ಚೇಸಿಂಗ್‌ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ 30 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ, ಕ್ರಿಕೆಟ್‌ಜೀವನದ ಬಹುಪಾಲು ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲೇ ಆಡಿದ ಅನುಭವ ಹೊಂದಿದ್ದ ಕೆಎಲ್‌ ರಾಹುಲ್‌ ಎಲ್ಲಾ ಒತ್ತಡವನ್ನು ಮೀರಿ 53 ಎಸೆತಗಳಲ್ಲಿಅಜೇಯ 93 ರನ್‌ ಬಾರಿಸಿ ತಂಡಕ್ಕೆ 6 ವಿಕೆಟ್‌ ಗೆಲುವು ನೀಡಿದರು. ಆರ್‌ಸಿಬಿ ನೀಡಿದ್ದ 164 ರನ್‌ಗಳ ಟಾರ್ಗೆಟ್‌ಅನ್ನು ಡೆಲ್ಲಿ ಕ್ಯಾಪಿಟಲ್ಸ್‌, 13 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್‌ ನಷ್ಟಕ್ಕೆ 169 ರನ್‌ ಬಾರಿಸಿ ಬೆನ್ನಟ್ಟಿತು.

ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ ಫಿಲ್‌ ಸಾಲ್ಟ್‌ (37 ರನ್‌, 17 ಎಸೆತ, 4 ಬೌಂಡರಿ, 3 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್‌ನಿಂದ ಉತ್ತಮ ಆರಂಭ ಪಡೆದಿತ್ತು. ಆದರೆ, 4ನೇ ಓವರ್ನ್ ಕೊನೇ ಎಸೆತದಲ್ಲಿ ಸಾಲ್ಟ್‌ ಔಟಾಗಿದ್ದು ಆರ್‌ಸಿಬಿಯ ರನ್‌ ಓಟಕ್ಕೆ ಕಡಿವಾಣ ಹೇರಿತು. ಇದರಿಂದಾಗಿ ಬ್ಯಾಟಿಂಗ್‌ ಹಾಗೂ ಚೇಸಿಂಗ್‌ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಅಷ್ಟೇನೂ ಉತ್ತಮವಲ್ಲ ಎನ್ನುವಂತೆ 163 ರನ್‌ ಪೇರಿಸಿತು. ಇದಕ್ಕಾಗಿ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೊನೇ ಹಂತದಲ್ಲಿ ಟಿಮ್‌ ಡೇವಿಡ್‌ 20 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 37 ರನ್‌ ಬಾರಿಸಿದ್ದು, ಆರ್‌ಸಿಬಿಯ ಸಾಧಾರಣ ಮೊತ್ತಕ್ಕೆ ಕಾರಣವಾಗಿತ್ತು.

3ನೇ ಓವರ್‌ನ ಮೊದಲ ಎಸೆತದಲ್ಲಿ ಮೆಕ್‌ಗುರ್ಕ್‌ ಔಟಾದ ಬಳಿಕ ಕ್ರೀಸ್‌ಗೆ ಇಳಿದಿದ್ದ ಕೆಎಲ್‌ ರಾಹುಲ್‌ ತಂಡದ ಗೆಲುವಿನವರೆಗೂ ಕ್ರೀಸ್‌ನಲ್ಲಿದ್ದರು. ಈ ವೇಳೆ ಅಭಿಷೇಕ್‌ ಪೊರೆಲ್‌ ಜೊತೆ 20 ರನ್‌ ಜೊತೆಯಾಟ ಹಾಗೂ ನಾಯಕ ಅಕ್ಷರ್‌ ಪಟೇಲ್‌ ಜೊತೆ 28 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೊನೆಗೆ ಟ್ರಿಸ್ಟಾನ್‌ ಸ್ಟಬ್ಸ್‌ ಜೊತೆ 5ನೇ ವಿಕೆಟ್‌ಗೆ ಮುರಿದ 111 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡಕ್ಕೆ ಗೆಲುವು ನೀಡಿದರು.

ಬೌಲಿಂಗ್‌ನಲ್ಲಿ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ಮೂರು ವಿಕೆಟ್‌ಗಳನ್ನು ಆರ್‌ಸಿಬಿ ಬೇಗನೆ ಉರುಳಿಸಿದಾಗ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಆದರೆ, ಚಿನ್ನಸ್ವಾಮಿಯ ಟ್ರಿಕ್ಕಿ ಪಿಚ್‌ನ ಮರ್ಮ ಅರಿತಿದ್ದ ಕೆಎಲ್‌ ರಾಹುಲ್‌ ಆರಂಭದಲ್ಲಿ ನಿಧಾನಗತಿಯ ಆಟವಾಡಿ, ಒಮ್ಮೆ ಲಯಕ್ಕೆ ಬಂದ ಬಳಿಕ ಅಬ್ಬರ ಆಟಕ್ಕೆ ಇಳಿದರು. ಇದರಿಂದಾಗಿ ಚಿನ್ನಸ್ವಾಮಿ ಮೈದಾನದಲ್ಲಿಯೇ ಆರ್‌ಸಿಬಿ ಅಭಿಮಾನಿಗಳನ್ನು ಸೈಲೆಂಟ್‌ ಮಾಡುವಲ್ಲಿ ಯಶಸ್ವಿಯೂ ಆದರು.

ಈ ಗೆಲುವಿನೊಂದಿಗೆ ಆಡಿದ ನಾಲ್ಕೂ ಪಂದ್ಯಗಳಲ್ಲಿ ನಾಲ್ಕನ್ನೂ ಗೆದ್ದು ಡೆಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದರೆ, ಐದು ಪಂದ್ಯಗಳಿಂದ 3 ಗೆಲುವು ಹಾಗೂ 2 ಸೋಲಿನೊಂದಿಗೆ ಆರ್‌ಸಿಬಿ 3ನೇ ಸ್ಥಾನಕ್ಕೆ ಕುಸಿದಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏ.13 ರಂದು ರಾಜಸ್ಥಾನ ರಾಯಲ್ಸ್‌ ವಿರುದ್ಧ ಆಡಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ಅದೇ ದಿನ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಲಿದೆ.

ವರದಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button