ನಂಜನಗೂಡಿನಲ್ಲಿ ಜನ ಸಂಗ್ರಾಮ ಪರಿಷತ್ ವತಿಯಿಂದ ಮೌನ ಪ್ರತಿಭಟನೆ

ನಂಜನಗೂಡು: ವಿಶ್ವಮಾನವ ಮಾನವ ಹಕ್ಕುಗಳ ದಿನದ ಅಂಗವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ವಿರೋಧಿಸಿ ನಂಜನಗೂಡಿನಲ್ಲಿ ಜನ ಸಂಗ್ರಾಮ ಪರಿಷತ್ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೇಣದಬತ್ತಿ ಹಚ್ಚಿ ಮೌನ ಪ್ರತಿಭಟನೆ ನಡೆಸಲಾಯಿತು.
ಜನ ಸಂಗ್ರಾಮ ಪರಿಷತ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪಾಲಹಳ್ಳಿ ಪ್ರಸನ್ನ ಮಾತನಾಡಿ, ವಿಶ್ವಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದರಿಂದ ಅಮಾನವೀಯ ದೌರ್ಜನ್ಯಗಳು ಇನ್ನೂ ಕೂಡ ನಡೆಯುತ್ತಿವೆ. ಮಕ್ಕಳು, ಅಸಹಾಯಕರು, ವಿಕಲಚೇತನರು, ಆದಿವಾಸಿಗಳು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಇಂತಹ ಹೇಯ ಕೃತ್ಯಗಳನ್ನು ಖಂಡಿಸಿ ವಿಶ್ವಾದ್ಯಂತ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಾನವನ ಹಕ್ಕುಗಳ ರಕ್ಷಣೆಗೆ ಕಠಿಣ ಕಾನೂನುಗಳು ಇದ್ದರು ಮಾನವ ಹಕ್ಕುಗಳ ರಕ್ಷಣೆ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ. ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಪಾಲಹಳ್ಳಿ ಪ್ರಸನ್ನ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ಸಾಹಿತಿ ಮುರುಡೇಶ್ ಮೂರ್ತಿ, ತಾಲ್ಲೂಕು ಸಂಚಾಲಕ ಜಯರಾಮ್, ಶಿವರಾಂ, ಶಶಿ, ಕೃಷ್ಣಮೂರ್ತಿ, ನಾಗರಾಜ್ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.