ಕ್ರೈಂ

ರಾಯಚೂರು | ಒಂದೇ ಕುಟುಂಬದ ಐವರ ಕೊಲೆ ಪ್ರಕರಣ; ಮೂವರಿಗೆ ಗಲ್ಲು‌ ಶಿಕ್ಷೆ, 9 ಮಂದಿಗೆ ಜೀವಾವಧಿ ಶಿಕ್ಷೆ

ರಾಯಚೂರು : ಸಿಂಧನೂರು ತಾಲೂಕಿನಲ್ಲಿ‌ ನಡೆದ ಒಂದೇ ಕುಟುಂಬದ ಐವರ ಕೊಲೆ ಹಾಗೂ ಇಬ್ಬರ ಮೇಲೆ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು‌ ರಾಯಚೂರು ಜಿಲ್ಲಾ 3ನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯ ಸಿಂಧನೂರು ಪೀಠಾಸೀನ ನ್ಯಾಯಾಧೀಶರಾದ ಬಿ.ಬಿ ಜಕಾತಿ ಅವರು ವಿಚಾರಣೆ ನಡೆಸಿ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಗೂ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ:

2020, ಜುಲೈ 11 ರಂದು ತನ್ನ ಪುತ್ರಿಯನ್ನು ಮೌನೇಶ ಎಂಬ ಯುವಕ ಪ್ರೀತಿಸಿದ ಎಂಬ ಕಾರಣಕ್ಕೆ ಜಿಲ್ಲೆಯ ಸಿಂಧನೂರು ನಗರದ ಸುಕಾಲಪೇಟೆಯ ಬಡಾವಣೆಯ ಹಿರೇಲಿಂಗೇಶ್ವರ ಕಾಲೊನಿಯಲ್ಲಿ ಯುವಕನ ಮನೆಗೆ ನುಗ್ಗಿ ಆತನ ತಂದೆ ಈರಪ್ಪ, ಈರಪ್ಪನ ಪತ್ನಿ ಸುಮಿತ್ರಮ್ಮ, ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳು‌ ಶ್ರೀದೇವಿ ಅವರನ್ನು ಆರೋಪಿಗಳಾದ ಸಣ್ಣ ಫಕೀರಪ್ಪ, ಅಂಬಣ್ಣ ಸೋಮಪ್ಪ ಕೋನದವರ, ಸೋಮಶೇಖರ ಸೇರಿಕೊಂಡು ಗುಂಪು ರಚಿಸಿ ಬಡಿಗೆಗಳಿಂದ ಹೊಡೆದು ಐವರನ್ನು ಕೊಲೆ ಮಾಡಿದ್ದರು.

4ನೇ ಆರೋಪಿ ರೇಖಾ, ಗಂಗಮ್ಮ, ದೊಡ್ಡ ಫಕೀರಪ್ಪ ಸೋಮಪ್ಪ ಕೊನದವರ, ಹನುಮಂತಪ್ಪ ಸೋಮಪ್ಪ, ಹೋನೂರಪ್ಪ ಸೋಮಪ್ಪ, ಬಸವಲಿಂಗಪ್ಪ ದೊಡ್ಡ ಫಕೀರಪ್ಪ, ಅಮರೇಶ, ಬಸಬಲಿಂಗಪ್ಪ ದೊಡ್ಡ ಫಕೀರಪ್ಪ ಅವರು ಕೊಲೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಘಟನೆಯಲ್ಲಿ ಈರಪ್ಪನ ಸೊಸೆ ರೇವತಿ ಹಾಗೂ ಮಗಳು ತಾಯಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಬಾಲಚಂದ್ರ ಲಖ್ಕಂ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಸಾಕ್ಷಿಗಳನ್ನು‌ ಸಾಕ್ಷಿ, ದಸ್ತಾವೇಜುಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಧೀಶರಾದ ಬಿ.ಬಿ.ಜಕಾತಿ ಅವರು ಆರೋಪಿ ಸಣ್ಣ ಫಕೀರಪ್ಪ, ಅಂಬಣ್ಣ ಹಾಗೂ ಸೋಮಶೇಖರ ಅವರಿಗೆ ಗಲ್ಲು ಶಿಕ್ಷೆ ಹಾಗೂ 47 ಸಾವಿರ ರೂಪಾಯಿ ದಂಡ ಹಾಗೂ ಉಳಿದ 9 ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 97,500 ರೂ ದಂಡ ವಿಧಿಸಿದೆ.

ಸರ್ಕಾರದ ಪರವಾಗಿ ಅಭಿಯೋಜನ ಆರ್ ಎ.ಗಡಕರಿ ವಾದ ಮಂಡಿಸಿದ್ದರು. ಮಹಿಳಾ ಪಿ.ಸಿ ಕೆಂಚಮ್ಮ, ಪಿಸಿ ಬೂದೆಪ್ಪ‌ ಸರಿಯಾದ ಸಮಯಕ್ಕೆ ಸಾಕ್ಷಿದಾರರನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button