ಸಿಂಧನೂರು: ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ

ಸಿಂಧನೂರು : ಕಳೆದ 10 ವರ್ಷಗಳಿಂದ ವಿಪರೀತ ಮೊಣಕಾಲು ಕೀಲು ನೋವಿನಿಂದ ಬಳಲುತ್ತಿದ್ದ ಸಿಂಧನೂರು ತಾಲ್ಲೂಕಿನ ಗೊರೇಬಾಳ ಗ್ರಾಮದ ನಿವಾಸಿ ಗಂಗಮ್ಮ (75) ಅವರಿಗೆ ಸ್ಥಳೀಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
‘ಮೊಣಕಾಲು ಕೀಲು ಮರು ಜೋಡಣಾ ಶಸ್ತ್ರಚಿಕಿತ್ಸೆಯನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ಮತ್ತು ವಿಜ್ಞಾನಗಳ ಸಂಸ್ಥೆಯ ನುರಿತ ವೈದ್ಯರಾದ ಡಾ.ವಿಜಯಕುಮಾರ್ ಮತ್ತು ಡಾ.ತುಷಾರ್ ನಾಯಕ್ ಅವರ ನೇತೃತ್ವದಲ್ಲಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆಗೆ ಎಲುಬು ಮತ್ತು ಕೀಲು ತಜ್ಞ ಡಾ.ಸಲಾವುದ್ದಿನ್ ಖಾಲಿದ್, ಅರವಳಿಕೆ ತಜ್ಞೆ ಡಾ.ಕೋನಿಕಾ ಕಾಟ್ವಾ, ಸಿಬ್ಬಂದಿ ಅನ್ನಪೂರ್ಣ, ತಿಮ್ಮೇಶ್, ಶಿವನಮ್ಮ, ರಾಜಾವಲಿ, ಅಡವಿಕಾಂತ್, ಅನಿಲ್ ಕುಮಾರ್, ರಾಜೇಶ್ ಮತ್ತಿತರರು ಸಹಕಾರ ನೀಡಿದ್ದಾರೆ’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ತಿಳಿಸಿದ್ದಾರೆ.
ಡಿಸಿ-ಸಿಇಒ ಪ್ರಶಂಸೆ: ಮೊಣಕಾಲು ಕೀಲು ಮರು ಜೋಡಣೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ಕರ್ನಾಟಕದ ಮೊದಲ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಸಿಂಧನೂರು ಸರ್ಕಾರಿ ಆಸ್ಪತ್ರೆ ಪಾತ್ರವಾದ ಕಾರಣ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ, ಶುಶ್ರೂಷಕ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ನಿತೀಶ್ ಕೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಡಿಎಚ್‌ಒ ಡಾ.ಸುರೇಂದ್ರಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಯುಷ್ಮಾನ್ ಕಾರ್ಡ್‍ನಡಿ ಚಿಕಿತ್ಸೆ: ಮಹಿಳೆಯರನ್ನೇ ಹೆಚ್ಚಾಗಿ ಕಾಡುವ ಈ ಮೊಣಕಾಲು ಕೀಲು ನೋವಿನ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ₹5 ಲಕ್ಷ ವೆಚ್ಚವಾಗಲಿದೆ. ಗೊರೇಬಾಳ ಗ್ರಾಮದ ಗಂಗಮ್ಮ ಅವರಿಗೆ ಆಯುಷ್ಮಾನ್ ಕಾರ್ಡ್‍ನಡಿ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಾರ್ಡ್ ಹೊಂದಿದವರಿಗೆ ₹5 ಲಕ್ಷ ಸಹಾಯಧನವನ್ನು ಸರ್ಕಾರವೇ ಭರಿಸಲಿದೆ ಎಂದು ಡಿಎಚ್‌ಒ ಡಾ.ಸುರೇಂದ್ರಬಾಬು ತಿಳಿಸಿದ್ದಾರೆ.
ತಪ್ಪು ಕಲ್ಪನೆ ಬೇಡ: ‘ತಿಂಗಳಿಗೆ ಹಲವಾರು ಜನ ಮೊಣಕಾಲು ಕೀಲು ನೋವಿನಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ಕೀಲು ನೋವು ಶಸ್ತ್ರಚಿಕಿತ್ಸೆ ಬಗ್ಗೆ ರೋಗಿಗಳಲ್ಲಿ ಇರುವ ತಪ್ಪು ಭಾವನೆಯಿಂದ ಚಿಕಿತ್ಸೆ ಪಡೆಯಲು ಭಯ ಪಡುತ್ತಾರೆ. ಮೊಣಕಾಲು ಕೀಲು ಬದಲಾವಣೆ ಶಸ್ತ್ರ ಚಿಕಿತ್ಸೆಯಿಂದ ರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಒಳಗಾಗಿ 7-8 ದಿನದಲ್ಲಿ ಮೊದಲಿನಂತೆ ಯಾವುದೇ ನೋವಿಲ್ಲದೆ ತಿರುಗಾಡಬಹುದಾಗಿದೆ’ ಎಂದು ಡಾ.ಸುರೇಂದ್ರಬಾಬು ಹೇಳಿದ್ದಾರೆ
.
