ರಾಜಕೀಯ

ಉಚ್ಟಾಟನೆಯಿಂದ ಯತ್ನಾಳ್ ಮೇಲಾಗುವ ಪರಿಣಾಮಗಳೇನು? ಶಾಸಕ ಸ್ಥಾನದ ಕಥೆ ಏನು?

ಬೆಂಗಳೂರು: ವಿಜಯಪುರದ(Vijayapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basangouda patil Yatnal ) ಬಿಜೆಪಿ ಗೇಟ್‌ಪಾಸ್ ನೀಡಿದೆ. ಮುಂದಿನ 6 ವರ್ಷಗಳ ಕಾಲ ಬಿಜೆಪಿಯಿಂದ ಯತ್ನಾಳ್‌ರನ್ನ ಉಚ್ಛಾಟನೆ ಮಾಡಲಾಗಿದೆ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಉಚ್ಛಾಟನೆ ಮಾಡಿ ಇಂದು (ಮಾರ್ಚ್ 26) ಆದೇಶ ಹೊರಡಿಸಿದೆ.

ಕಳೆದ ಫೆಬ್ರವರಿ 10ರಂದು ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್‌ಗೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ನೀಡಿದ ಬಳಿಕವೂ ಪಕ್ಷದ ಶಿಸ್ತನ್ನ ಉಲ್ಲಂಘಿಸಲಾಗಿದೆ ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ರದ್ದುಗೊಳಿಸಿ ಇಲ್ಲಿವರೆಗೂ ಯತ್ನಾಳ್ ಹೊಂದಿದ್ದ ಎಲ್ಲಾ ಪಕ್ಷದ ಹುದ್ದೆಗಳಿಂದಲೂ ಗೇಟ್‌ಪಾಸ್ ನೀಡಲಾಗಿದೆ.

ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆಯ ಭರವಸೆಗಳನ್ನು ನೀಡಿದ್ದೀರಿ. ಆದರೂ ನೀವು ಪಕ್ಷದ ಶಿಸ್ತಿನ್ನ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಮ್ಮನ್ನು 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ. ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಉಚ್ಛಾಟನೆ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಯತ್ನಾಳ್ ಇನ್ಮುಂಡ​​ ಅನ್ ಅಟ್ಯಾಚ್ಡ್ ಮೆಂಬರ್

ಬಸನಗೌಡ ಪಾಟೀಲ್​ ಯತ್ನಾಳ್‌ರನ್ನ ವಿಧಾನಸಭೆಯ ನಿಯಮದ ಪುಸ್ತಕದಲ್ಲಿ ಅನ್ ಅಟ್ಯಾಚ್ಡ್ ಮೆಂಬರ್ ಎಂದು ಪರಿಗಣಿಸಲಾಗುತ್ತೆ. ಪಕ್ಷದ ಯಾವುದೇ ವಿಪ್ ಯತ್ನಾಳ್‌ಗೆ ಅನ್ವಯಿಸುವುದಿಲ್ಲ. ಬಿಜೆಪಿ ಶಾಸಕಾಂಗ ಸಭೆಗಳಲ್ಲಿ ಭಾಗವಹಿಸಲು ಅವಕಾಶ ಇರಲ್ಲ. ಸದನದಲ್ಲಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತೆ. ಇನ್ನು ಯತ್ನಾಳ್​ ಉಚ್ಚಾಟನೆಗೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ, ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಇನ್ನು ಬಿಜೆಪಿ ಚಿಹ್ನೆಯಡಿ ಗೆದ್ದಿರುವ ಯತ್ನಾಳ್​, ಶಾಸಕ ಸ್ಥಾನ ಬೇಡ ಎಂದಾದಲ್ಲಿ ರಾಜೀನಾಮೆ ನೀಡಬಹುದು. ಆದ್ರೆ, ಬೇರೆ ಪಕ್ಷ ಸೇರ್ಪಡೆ ಆಗಬಾರದು. ಒಂದು ವೇಳೆ ಬೇರೆ ಪಕ್ಷ ಸೇರ್ಪಡೆಯಾದ್ರೆ ಯತ್ನಾಳ್ ಶಾಸಕ ಸ್ಥಾನ ರದ್ದಾಗುತ್ತೆ.

ಯತ್ನಾಳ್​ ಮುಂದಿನ ನಡೆ ಕುತೂಹಲ

ಇನ್ನು ಉಚ್ಛಾಟನೆಗೊಂಡಿರುವ ಬಸನಗೌಡ ಪಾಟೀಲ್​ ಯತ್ನಾಳ್​​ ಅವರ ಮುಂದಿನ ರಾಜಕೀಯ ನಡೆ ಏನು ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಈಗಾಗಲೇ ಅವರೇ ಹೇಳಿರುವಂತೆ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತಮ್ಮ ಹೋರಾಟ ಮುಂದುವರಿಸುವ ಸುಳಿವು ಕೊಟ್ಟಿದ್ದಾರೆ. ಹೋದರಲ್ಲಿ ಬಂದಲ್ಲಿ ವಿಜಯೇಂದ್ರ ವಿರುದ್ಧ ಮತ್ತಷ್ಟು ಟೀಕೆಗಳನ್ನು ಮಾಡಬಹುದು. ಈಗ ಯತ್ನಾಳ್​​ಗೆ ಯಾವುದೇ ಅಡ್ಡಿ ಅಡಚರಣೆ ಮಾಡುವವರಿಲ್ಲ, ಹೀಗಾಗಿ ಅವರು ತಮ್ಮ ಮಾತಿನ ಸಮರ ಜೋರು ಮಾಡಬಹುದು. ಹಾಗೇ ರಮೇಶ್ ಜಾರಕಿಹೊಳಿ, ಸಿದ್ದೇಶ್ವರ್, ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಸೇರಿದಂತೆ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರ ಮೂಲಕ ರಾಜಕೀಯ ಆಟವಾಡಬಹುದು. ಇದನ್ನು ಬಿಟ್ಟು ಮತ್ತೇನು ರಾಜಕೀಯ ಆಟವಾಡುತ್ತಾರೆ ಎನ್ನುವುದೇ ಕುತೂಹಲ.

ಒಟ್ಟಿನಲ್ಲಿ ಕಾದು ಕಾದು ಕೊನೆಗೆ ಹೈಕಮಾಂಡ್​, ರಾಜ್ಯ ಬಿಜೆಪಿಯಲ್ಲಿ ಹಾದಿ ಬೀದಿಯಲ್ಲಿ ನಡೆಯುತ್ತಿದ್ದ ಬಣ ಬಡಿದಾಟಕ್ಕೆ ಆಪರೇಷನ್ ಮಾಡಿದೆ. ಆದ್ರೆ, ಬಣ ಕಿಚ್ಚು ಕಡಿಮೆಯಾಗುತ್ತಾ? ಮತ್ತಷ್ಟು ಹೆಚ್ಚಾಗುತ್ತಾ ಕಾದುನೋಡಬೇಕಿದೆ.

ಮೊಹಮ್ಮದ್ ಶಫಿ ಸ್ಪೆಶಲ್ ಡೆಸ್ಕ್ ಪೊಲಿಟಿಕಲ್ ಬ್ಯೂರೋ tv8kannada ಬೆಂಗಳೂರು

ವಿ.ಸೂ : ಆತ್ಮೀಯರೇ ನಿಮಗೇನಾದ್ರೂ ವೆಬ್ ಸೈಟ್ ನ ಮಾಹಿತಿ ಹಾಗು ಅವಶ್ಯಕತೆ ಇದ್ರೆ ದಯವಿಟ್ಟು ಸಂಪರ್ಕಿಸಿ :

Related Articles

Leave a Reply

Your email address will not be published. Required fields are marked *

Back to top button