ರಾಜಕೀಯ

ಕರ್ನಾಟಕ ವಿಧಾನ ಸಭೆ ಕಲಾಪದ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು

ಕರ್ನಾಟಕ ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿ ಸ್ಪೀಕರ್‌ ಯು.ಟಿ ಖಾದರ್‌ ಆದೇಶ ನೀಡಿದ್ದಾರೆ. ಸ್ಪೀಕರ್​ ಯುಟಿ ಖಾದರ್ ಅವರು ಸದನದಲ್ಲಿ ಅಮಾನತುಗೊಳಿಸಿದವರನ್ನು ಹೆಸರು ಹೇಳುತ್ತಿದ್ದಂತೆಯೇ ಅವರು ಹೊರ ಹೋಗದ ಕಾರಣ ಮಾರ್ಷಲ್ಸ್ ಒಬ್ಬೊಬ್ಬರನ್ನೇ ಎತ್ತಿ ಸದನದಿಂದ ಹೊರ ಹಾಕಿದರು.

ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡ ಕಾರಣ ಸ್ಪೀಕರ್‌ ಆದೇಶ ಪ್ರಕಾರ 18 ಬಿಜೆಪಿ ಸದಸ್ಯರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿರುತ್ತದೆ ಎಂದು ಸ್ಪೀಕರ್‌ ಹೇಳಿದರು.

ಕರ್ನಾಟಕ ವಿಧಾನಸಭೆಯಿಂದ ಅಮಾನತಾದ 18 ಬಿಜೆಪಿ ಶಾಸಕರು

ಡಾ. ಅಶ್ವಥ್ ನಾರಾಯಣ, ದೊಡ್ಡನಗೌಡ ಪಾಟೀಲ್, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್., ಸಿ.ಕೆ. ರಾಮಮೂರ್ತಿ. ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ, ಎಸ್. ಆರ್. ವಿಶ್ವನಾಥ್, ಎಂ.ಆರ್. ಪಾಟೀಲ್.

ಅಮಾನತು ಅವಧಿಯಲ್ಲಿ ನಿರ್ಬಂಧ ಏನೇನು

ಅಮಾನತು ಆಗಿರುವ 18 ಬಿಜೆಪಿ ಸದಸ್ಯರು ಮುಂದಿನ 6 ತಿಂಗಳ ಅವಧಿಯಲ್ಲಿ

1) ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.

2) ಅವರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.

3) ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.

4) ಅಮಾನತ್ತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.

5) ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ.

6) ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.

ಸದನ ಕಲಾಪದ ನಡುವೆ ಗದ್ದಲ; ಕಾಗದ ಹರಿದು ಸ್ಪೀಕರ್ ಪೀಠಕ್ಕೆ ಎಸೆದ ಬಿಜೆಪಿ ಸದಸ್ಯರು

ವಿಧಾನ ಸಭೆ ಕಲಾಪದ ನಡುವೆ, ಮುಸ್ಲಿಂ ಮೀಸಲಾತಿ ವಿಚಾರ ಸೇರಿ ಕರ್ನಾಟಕ ಬಜೆಟ್‌ಗೆ ಅನುಮೋದನೆ ಪಡೆಯುವ ವೇಳೆ ಪ್ರತಿ ಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದರು. ತಮ್ಮ ಆಸನ ಬಿಟ್ಟು ಸ್ಪೀಕರ್ ಪೀಠದ ಎದುರು ನಿಂತು ಘೋಷಣೆ ಕೂಗಿದರು. ಗದ್ದಲದ ಸನ್ನಿವೇಶ ಸೃಷ್ಟಿಯಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು ಮುಂದುವರಿದಂತೆ, ಗದ್ದಲ ಹೆಚ್ಚಾಗಿ ಬಿಜೆಪಿ ಸದಸ್ಯರು ಕಾಗದ ಹರಿದು ಚೂರು ಮಾಡಿ ಸ್ಪೀಕರ್ ಪೀಠದ ಕಡೆಗೆ ಎಸೆದುದು ಕಂಡುಬಂತು. ಈ ನಡುವೆ, ಹನಿಟ್ರ್ಯಾಪ್ ವಿಚಾರವೂ ಪ್ರಸ್ತಾಪವಾಯಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಗದ್ದಲದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಧನ ವಿನಿಯೋಗ ವಿಧೇಯಕ ಪ್ರಸ್ತಾವನೆಯನ್ನು ಸ್ಪೀಕರ್ ಮತಕ್ಕೆ ಹಾಕಿದ್ದರು. ಅದು ಅಂಗೀಕಾರವಾಯಿತು. ಬಳಿಕ ಸ್ಪೀಕರ್ ಯುಟಿ ಖಾದರ್ ಅವರು ಕಲಾಪವನ್ನು 10 ನಿಮಿಷ ಮುಂದೂಡಿದರು. ಬಳಿಕ ಪುನ ಕಲಾಪ ಶುರು ಮಾಡಿದ ಸ್ಪೀಕರ್ ಯುಟಿ ಖಾದರ್, ಸ್ಪೀಕರ್ ಪೀಠಕ್ಕೆ ಅಗೌರವವಾಗಿ ನಡೆದುಕೊಂಡ ವಿಚಾರ ಪ್ರಸ್ತಾಪಿಸಿದರು. ಅಲ್ಲದೆ, ಗಂಭೀರವಾದ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಸಭಾಧ್ಯಕ್ಷರ ಪೀಠದ ಆದೇಶ ಲೆಕ್ಕಿಸದೇ, ಸದನದ ಪಾವಿತ್ರ್ಯವನ್ನು ಕಡೆಗಣಿಸಿದ್ದಾರೆ. ಹೀಗಾಗಿ ಇಂತಹ ಸದಸ್ಯರನ್ನು ಯುಟಿ ಖಾದರ್ ಕ್ಷಮಿಸಬಹುದು. ಆದರೆ, ಸಭಾಧ್ಯಕ್ಷರ ಪೀಠ ಕ್ಷಮಿಸದು ಎಂದು ಸ್ಪಷ್ಟಪಡಿಸಿ ಆದೇಶವನ್ನು ವಿಧಾನ ಸಭೆ ಕಲಾಪದಲ್ಲಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button