Sikandar Movie Release: ಸಿಕಂದರ್‌ಗೆ ಡೇಟ್ ಫಿಕ್ಸ್; ಯುಗಾದಿ ದಿನವೇ ರಿಲೀಸ್ ಆಗಲಿದೆ ಸಲ್ಮಾನ್ ಖಾನ್ ಸಿನಿಮಾ

ಸಲ್ಮಾನ್ ಖಾನ್ -ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಸಿನಿಮಾ ರಿಲೀಸ್ ಯಾವಾಗ ಆಗುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಸಿಕಂದರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇತ್ತೀಚೆಗೆ ಟೀಸರ್, ಎರಡು ಹಾಡುಗಳು ರಿಲೀಸ್ ಆಗಿದ್ದವು. ಸಿಕಂದರ್ ಚಿತ್ರ ಈ ವರ್ಷ ಈದ್ ಹೊತ್ತಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ, ಚಿತ್ರ ನಿರ್ಮಾಪಕರು ದಿನಾಂಕವನ್ನ ಘೋಷಿಸಿರಲಿಲ್ಲ.
ಆದರೆ ಈಗ ಚಿತ್ರ ರಿಲೀಸ್ ಡೇಟ್ ಘೋಷಣೆಯಾಗಿದೆ..
ಸಿಕಂದರ್ ಸಿನಿಮಾ ಬಿಡುಗಡೆ ಯಾವಾಗ?
ಸಿಕಂದರ್ ಸಿನಿಮಾ ಮಾರ್ಚ್ 30ರಂದು ತೆರೆಕಾಣಲಿದೆ. ಈ ಬಾರಿ ಯುಗಾದಿ ಮಾರ್ಚ್ 30ಕ್ಕೆ. ಮಾರ್ಚ್ 31 ಮತ್ತು ಏಪ್ರಿಲ್ 1ಕ್ಕೆ ಈದ್ ಹಬ್ಬ. ಈ ಹಬ್ಬಗಳ ಜೊತೆಜೊತೆಗೇ ಸಿಕಂದರ್ ಹಬ್ಬವೂ ಇರಲಿದೆ. ಈದ್, ಗುಡಿ ಪಾಡ್ವಾ ಮತ್ತು ಯುಗಾದಿ ಹಬ್ಬಗಳನ್ನ ಸಿಕಂದರ್ ಜೊತೆಗೇ ಸಂಭ್ರಮಿಸಬಹುದಾಗಿದೆ. ಈ ಟೈಮ್‌ನಲ್ಲಿ ರಜೆ ಕೂಡ ಇರೋದ್ರಿಂದ ಸಿಕಂದರ್ ಪ್ರಾರಂಭದ ಎರಡು ದಿನಗಳಲ್ಲೇ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆಯೂ ಇದೆ. ಜನಪ್ರಿಯ ಚಲನಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದಾರೆ.
ಸಿಕಂದರ್‌ನಲ್ಲಿ ಸಲ್ಮಾನ್ ಖಾನ್ ಹೈ ಎನರ್ಜಿ ಪಾತ್ರವನ್ನ ನಿಭಾಯಿಸಿದ್ದಾರೆ. ಇದೊಂದು ಪಕ್ಕಾ ಪವರ್ ಪ್ಯಾಕ್ಡ್ ಸಿನಿಮಾ ಅನ್ನೋದು ಟೀಸರ್ ಬಿಡುಗಡೆಯಾದಾಗಲೇ ನಿಶ್ಚಿತವಾಗಿದೆ. ಥ್ರಿಲ್ಲಿಂಗ್ ಆಕ್ಷನ್‌ಗಳು ಇರಲಿವೆ. ಹಾಗೇ, ರಶ್ಮಿಕಾ ಕೂಡ ಚಿತ್ರದಲ್ಲಿ ಮಿಂಚಿದ್ದಾರೆ. ಕಾಜಲ್ ಅಗರ್‌ವಾಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಸಿನಿಮಾ ಹಿಟ್ ಆಗಿಯೇ ಆಗುತ್ತದೆ, ಜನ ಮೆಚ್ಚಿಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿ ಚಿತ್ರ ತಂಡ ಇದೆ.
ಸಿಕಂದರ್ ಸಿನಿಮಾವನ್ನ ಎ.ಆರ್.ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಮುರುಗದಾಸ್ ಅವರು ತಮಿಳು ಮತ್ತು ಹಿಂದಿ ಸಿನಿಮಾಗಳ ಯಶಸ್ವಿ ನಿರ್ದೇಶಕರು. ಗಜನಿ ಮತ್ತು ತುಪ್ಪಕ್ಕಿಯಂಥ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಸಿನಿಮಾದಲ್ಲಿ ಸಲ್ಮಾನ್, ರಶ್ಮಿಕಾ, ಕಾಜಲ್ ಅಗರವಾಲ್ ಜೊತೆ ಸತ್ಯರಾಜ್, ಶರ್ಮನ್ ಜೋಶಿ ಮತ್ತಿತರು ಇದ್ದಾರೆ. ಇನ್ನು ಸಿಕಂದರ್ ಸಿನಿಮಾಕ್ಕಾಗಿ ಸಲ್ಮಾನ್ 120 ಕೋಟಿ ರೂಪಾಯಿ ಪಡೆದಿದ್ದಾರೆ. ರಶ್ಮಿಕಾ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.