ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ 58 ಕೋಟಿ ರೂ. ಬಹುಮಾನ ಘೋಷಣೆ ಮಾಡಿದ ಬಿಸಿಸಿಐ: ಯಾರಿಗೆ ಎಷ್ಟು?

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ನ್ಯೂಜಿಲೆಂಡ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಜಯ ದಾಖಲಿಸಿದೆ.
ಈ ಗೆಲುವು ಅಭಿಮಾನಿಗಳಿಗೆ ತುಂಬ ಖುಷಿ ನೀಡಿದೆ. ಈಗ ಟೀಮ್ ಇಂಡಿಯಾದ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸುವ ಕೆಲಸವನ್ನು ಬಿಸಿಸಿಐ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಒಂದೆ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ತನ್ನ ಯಾತ್ರೆಯನ್ನು ಮುಗಿಸಿದೆ. ಈ ಟ್ರೋಫಿಯನ್ನು ಗೆದ್ದ ತಂಡಕ್ಕೆ 20 ಕೋಟಿ ರೂಪಾಯಿ ಬಹುಮಾನ ಮೊತ್ತವಾಗಿ ಸಂದಿದೆ. ಈಗ ಬಿಸಿಸಿಐ ಚಾಂಪಿಯನ್ ತಂಡಕ್ಕೆ 58 ರೂಪಾಯಿಗಳ ಭಾರೀ ಬಹುಮಾನ ಮೊತ್ತವನ್ನು ಘೋಷಿಸಿದೆ. ಈ ಬಹುಮಾನದ ಹಣವನ್ನು 2025 ರ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ತಂಡದ ಸದಸ್ಯರು, ತರಬೇತಿ ಸಿಬ್ಬಂದಿ ಮತ್ತು ಆಯ್ಕೆ ಸಮಿತಿಯ ಸದಸ್ಯರಿಗೆ ವಿತರಿಸಲಾಗುತ್ತದೆ. ಹಾಗಿದ್ರೆ ಯಾರಿಗೆ ಎಷ್ಟು ಹಣ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಚಾಂಪಿಯನ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ತಂಡ ಪ್ರತಿ ಸದಸ್ಯನಿಗೆ ತಲಾ 3 ಕೋಟಿ ರೂ. ಸಿಗಲಿದೆ. ಉಳಿದಂತೆ ಸಹಾಯಕ ಸಿಬ್ಬಂದಿ ಮತ್ತು ಆಯ್ಕೆ ಸಮಿತಿಯ ಪ್ರತಿಯೊಬ್ಬ ಸದಸ್ಯರಿಗೆ ತಲಾ 50 ಲಕ್ಷ ರೂ. ಬಹುಮಾನ ಮೊತ್ತವನ್ನು ಪಡೆಯಲಿದ್ದಾರೆ.
ಒಂದೇ ಒಂದು ಪಂದ್ಯ ಆಡದ ಆಟಗಾರರು?
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದ ಮೂವರು ಆಟಗಾರರು ಒಂದೇ ಒಂದು ಪಂದ್ಯವನ್ನು ಆಡದೆ ಟೂರ್ನಿಗೆ ಗುಡ್ ಬಾಯ್ ಹೇಳಿದ್ರು. ಅದರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ವೇಗಿ ಅರ್ಷದಿಪ್ ಸಿಂಗ್, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸೇರಿದ್ದಾರೆ. ಈ ಮೂವರು ಆಟಗಾರರು ಚಾಂಪಿಯನ್ಸ್ ಟ್ರೋಫಿಯ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಇವರು ಪಂದ್ಯ ಆಡದೇ ವಿಜೇತ ಪಟ್ಟವನ್ನು ಅಲಂಕರಿಸಿದರು. ಈ ಮೂವರು ಆಟಗಾರರ ಸಹ ತಲಾ ಮೂರು ಕೋಟಿ ರೂ. ಪಡೆಯಲಿದ್ದಾರೆ.
ಎಲ್ಲ ಟಾಸ್ ಸೋತಿದ್ದ ರೋಹಿತ್
ರೋಹಿತ್ ಶರ್ಮಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಟಾಸ್ ಸೋತಿದ್ದಾರೆ. ಆದ್ರೆ ಎಲ್ಲ ಪಂದ್ಯಗಳ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಈ ಐದೂ ಪಂದ್ಯಗಳಲ್ಲಿ ರೋಹಿತ್ ಟಾಸ್ ಸೋತರೂ ಸಹ, ತಂಡ ಭರ್ಜರಿ ಪ್ರದರ್ಶನ ನೀಡಿದೆ. ಅಲ್ಲದೆ ಎಲ್ಲಾ ಪಂದ್ಯಗಳಲ್ಲಿ ಟಾಸ್ ಸೋತರೂ ಸಹ ಪ್ರಶಸ್ತಿ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಕ್ರಿಕೆಟ್ ತಂಡ ಪಾತ್ರವಾಯಿತು.
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜ, ವರುಣ್ ಚಕ್ರವರ್ತಿ.
ವರದಿ ಹಾಗು ಮಾಹಿತಿ : ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು