ಇತ್ತೀಚಿನ ಸುದ್ದಿ
ಬೇಸಿಗೆಯಲ್ಲೂ ಅಬ್ಬರದ ಮಳೆ; ಕಟಾವಿಗೆ ಬಂದಿದ್ದ ಬಾಳೆ ನಾಶವಾಗಿ ಕಣ್ಣೀರಿಟ್ಟ ರೈತ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರದಂದು ಹಲವು ಕಡೆ ವರ್ಷದ ಮೊದಲ ಮಳೆಯಾಗಿದ್ದು, ಆ ಮಳೆ ಬಾಳೆಗೆ ಸಂಕಷ್ಟ ತಂದಿದೆ.
ಜಿಲ್ಲೆಯಲ್ಲಿ ನಿನ್ನೆ ರಾತ್ರಿ(ಮಾರ್ಚ್.12) ಹಲವೆಡೆ ಸುರಿದ ವರ್ಷದ ಮೊದಲ ಮಳೆಯಿಂದ ಜನರಿಗೆ ಒಂದೆಡೆ ಸಂತಸವಾಗಿದ್ದರೆ, ಮತ್ತೊಂದೆಡೆ ಬಿರುಗಾಳಿಯಿಂದ ರೈತರು ಬೆಳೆದಿರುವ ಬಾಳೆಯ ನಷ್ಟಕ್ಕೆ ಕಾರಣವಾಗಿದೆ.
ಬಿರುಗಾಳಿ ಮಳೆಗೆ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿರುವ ಘಟನೆ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ. ರಾ. ಬಾಬು ಎಂಬ ರೈತ ತನ್ನ ಜಮೀನಿನಲ್ಲಿ ಏಲಕ್ಕಿ ಬಾಳೆಯನ್ನು ಬೆಳೆದಿದ್ದರು. ಆದರೆ ಅಚಾನಕ್ ಆಗಿ ಬಂದ ಮಳೆಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಏಲಕ್ಕಿ ಬಾಳೆ ಬೆಳೆಯೂ ಸಂಪೂರ್ಣ ನೆಲಕಚ್ಚಿದೆ.
ಇನ್ನು 30 ನಿಮಿಷ ಬಿದ್ದ ಭಾರೀಮಳೆಗೆ ಲಕ್ಷಾಂತರ ರೂ. ಆದಾಯವನ್ನು ರೈತ ಕಳೆದುಕೊಂಡು ಚಿಂತೆಗೀಡಾಗಿದ್ದಾರೆ.
ವರದಿ : ಸಿದ್ದಪ್ಪಾಜಿ ಇರಸವಾಡಿ tv8kannada ಚಾಮರಾಜನಗರ