ಮೈಕೋ ಫೈನಾನ್ ವಿಧೇಯಕ ಅಂಗೀಕಾರ ಕಿರುಕುಳಕ್ಕೆ 10 ವರ್ಷ ಜೈಲು, ಐದು ಲಕ ರೂ. ದಂಡ

ಬೆಂಗಳೂರು : ಫೈನಾನ್ಸ್ ಹೆಸರಿನಲ್ಲಿ ದೌರ್ಜನ್ಯವೆಸಗುವವರಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ. ದಂಡ ಹಾಗೂ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸುವ ಕರ್ನಾಟಕ ಕಿರು(ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ-2025 ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಸೋಮವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್. ಕೆ. ಪಾಟೀಲ್ ಅವರು ಮಂಡಿಸಿದ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025ಕ್ಕೆ ಸುದೀರ್ಘ ಚರ್ಚೆಯ ಬಳಿಕ ವಿಪಕ್ಷಗಳ ಸಲಹೆ ಹಾಗೂ ಸಹಮತದಿಂದ ಅನುಮೋದನೆ ದೊರೆಯಿತು.
ಆರಂಭದಲ್ಲಿ ವಿಷಯ ಪ್ರಸ್ತಾವಿಸಿದ ಎಚ್. ಕೆ.ಪಾಟೀಲ್, ಕಿರು ಸಾಲ, ಸಣ್ಣ ಸಾಲ, ಖಾಸಗಿ
ಹಣಕಾಸು ಮತ್ತು ಇತರ ಅನಿಯಂತ್ರಿತ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ. ಲೇವಾದೇವಿದಾರರ ಕಾರಣದಿಂದಾಗಿ ಸಾಲಗಾರರು ಬೀದಿಗೆ ಬರುವಂತೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಪಡಿಸಲಾಗುತ್ತಿದೆ.
ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಗುರಿ ವಿಧೇಯಕ ಹೊಂದಿದೆ. ಜತೆಗೆ ಪೊಲೀಸರಿಗೆ ಇನ್ನಷ್ಟು ಬಲ ನೀಡಿ ಕಾನೂನು ರಕ್ಷಣೆ ಮಾಡಬಹುದಾಗಿದೆ ಎಂದರು.
ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಈಗಾಗಲೇ ಇರುವ ಕಾನೂನುಗಳ ಮೂಲಕ ಅಕ್ರಮವಾಗಿ ಫೈನಾನ್ಸ್ ದಂಧೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬಹುದಾಗಿತ್ತು. ಹಲವು ಪ್ರಕರಣಗಳು ಕಣ್ಣಿನ ಮುಂದೆ ಜರುಗಿದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಇದರಿಂದ ಬಡಜನರ ಪ್ರಾಣವೂ ನಷ್ಟವಾಯಿತು ಎಂದು ಸದನದ ಗಮನ ಸೆಳೆದರು.
ಈ ವಿಧೇಯಕ ಮೂಲಕ ರಾಜ್ಯ ಸರಕಾರ ಹೊಸ ಕಾನೂನು ಜಾರಿಗೆ ತರಲು ಹೊರಟಿದೆ.ಆದರೆ, ಯಾವುದೇ ಕಾರಣಕ್ಕೂ ಕೋರ್ಟಿನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಜತೆಗೆ, ನ್ಯಾಯಯುತವಾಗಿ ಸಾಲ ನೀಡುವ ಮಂದಿಗೂ ಹಾನಿಯಾಗದಂತೆ ಸರಕಾರ ಗಮನ ನೀಡಬೇಕೆಂದು ಸಲಹೆ ನೀಡಿದರು.