ಇತ್ತೀಚಿನ ಸುದ್ದಿ

ಲಿಂಗಸುಗೂರು: ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆಗೆ ಸಜ್ಜು

ಲಿಂಗಸುಗೂರು: ಪಟ್ಟಣದ ಸಾರಿಗೆ ಘಟಕದ ಎದುರು ನಿರ್ಮಾಣಗೊಂಡ ತಾಲ್ಲೂಕು ನ್ಯಾಯಾಲಯಗಳ ನೂತನ ಸಂಕೀರ್ಣ ಉದ್ಘಾಟನೆಗೆ ಸಜ್ಜುಗೊಂಡಿದೆ.

ಪಟ್ಟಣದಲ್ಲಿರುವ ತಾಲ್ಲೂಕು ನ್ಯಾಯಾಲಯ ಹಳೆಯ ಸಂಕೀರ್ಣದಲ್ಲಿ ಪ್ರಸ್ತುತ ಹಿರಿಯ ಶ್ರೇಣಿ, ಪ್ರಧಾನ, ನ್ಯಾಯಾಲಯಗಳು ಮತ್ತು ವಾರದಲ್ಲಿ ಎರಡು ದಿನ ಜಿಲ್ಲಾ 3ನೇ ಹೆಚ್ಚುವರಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.

ಈ ಕಟ್ಟಡ ಚಿಕ್ಕದಾಗಿದ್ದು, ಪ್ರಕರಣಗಳ ಸಂಖ್ಯೆ, ವಕೀಲರ ಸಂಖ್ಯೆಯೂ ಹೆಚ್ಚಾಗಿದ್ದರಿಂದ ಇಲ್ಲಿ ಸಮರ್ಪಕ ಕಾರ್ಯನಿರ್ವಹಣೆಗೆ ತೊಂದರೆಯಾಗಿದ್ದರಿಂದ ನ್ಯಾಯಾಲಯ ಹೊಸ ಸಂಕೀರ್ಣ ನಿರ್ಮಾಣಕ್ಕೆ ಈ ಹಿಂದೆ ಬೈಪಾಸ್ ರಸ್ತೆಯ ಮಿನಿ ವಿಧಾನಸೌಧದ ಬಳಿ ಎಂಟು ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಪಟ್ಟಣದಿಂದ ಮೂರು ಕಿ.ಮೀ ದೂರ ಇರುವುದರಿಂದ ಕಕ್ಷಿದಾರರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಪಟ್ಟಣದ ಬಸ್ ಡಿಪೋ ಎದುರಿನ ಹಳೆಯ ವಿಸಿಬಿ ಕಾಲೇಜಿನ ಜಾಗವನ್ನೇ ಅಂತಿಮಗೊಳಿಸಿ ನ್ಯಾಯಾಲಯದ ಸಂಕೀರ್ಣ ನಿರ್ಮಿಸಲಾಗಿದೆ.

₹21 ಕೋಟಿ ವೆಚ್ಚ: 2017-18ನೇ ಸಾಲಿನ ಲೆಕ್ಕ ಶಿರ್ಷಿಕೆ 4059ರ ₹1,582 ಲಕ್ಷ ಅನುದಾನದಲ್ಲಿ ನ್ಯಾಯಾಲಯಗಳ ಕಟ್ಟಡಗಳ ಸಂಕೀರ್ಣ, ಕಾಂಪೌಂಡ್, ₹3 ಕೋಟಿ ಅನುದಾನದಲ್ಲಿ ವಕೀಲರ ಭವನ, ಕ್ಯಾಂಟೀನ್ ಹಾಗೂ ₹2 ಕೋಟಿ ವೆಚ್ಚದಲ್ಲಿ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಪಟ್ಟಣಕ್ಕೆ ಜಿಲ್ಲಾ ಹೆಚ್ಚುವರಿ ಕಾಯಂ ಪೀಠ ಮಂಜೂರಾದರೆ ಆ ನ್ಯಾಯಾಧೀಶರ ವಸತಿ ಗೃಹಕ್ಕಾಗಿ ಜಾಗ ಮೀಸಲಿಡಲಾಗಿದೆ.

ಸಂಕೀರ್ಣದಲ್ಲಿ ಸೌಲಭ್ಯಗಳೇನು?: ನ್ಯಾಯಾಲಯದ ನೂತನ ಸಂಕೀರ್ಣದಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ, ಹಿರಿಯ ಶ್ರೇಣಿ ನ್ಯಾಯಾಲಯ, ಪ್ರಧಾನ ಹಾಗೂ ಹೆಚ್ಚುವರಿ ನ್ಯಾಯಾಲಯಗಳ ಹಾಲ್ ನಿರ್ಮಾಣ ಮಾಡಲಾಗಿದೆ. ಪ್ರತ್ಯೇಕ ವಿಡಿಯೊ ಸಂವಾದ ಕೊಠಡಿ, ವಕೀಲರ ಭವನದಲ್ಲಿ ನೋಟರಿಗಳಿಗೆ ಪ್ರತ್ಯೇಕ ಕೊಠಡಿ, ವಕೀಲರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ಪ್ರತ್ಯೇಕ ಕೊಠಡಿ, ಕ್ಯಾಂಟೀನ್, ಬ್ಯಾಂಕ್, ಎಟಿಎಂ, ಅಂಚೆ ಕಚೇರಿ, ಕಕ್ಷಿದಾರರ ಕೊಠಡಿ, ತಾಯಿ ಮಕ್ಕಳಿಗೆ ಪ್ರತ್ಯೇಕ ಕೊಠಡಿ, ಹೈಟೆಕ್ ಗ್ರಂಥಾಲಯ, ಪ್ರತ್ಯೇಕ ಶೌಚಾಲಯಗಳು ಸೇರಿ ಅತ್ಯಾಧುನಿಕ ಸೌಲಭ್ಯವುಳ್ಳ ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ನ್ಯಾಯಾಲಯ ಹಾಗೂ ವಕೀಲರ ಭವನದಲ್ಲಿ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಾ.1ಕ್ಕೆ ಉದ್ಘಾಟನೆ: ಮಾರ್ಚ್‌ 1ರಂದು ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆಗೆ ದಿನ ನಿಗದಿ ಮಾಡಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಜಿಲ್ಲಾ ಉಸ್ತುವಾರಿ ನ್ಯಾಯಮೂರ್ತಿಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವರದಿ : ಮುಸ್ತಾಫಾ tv8kannada ಲಿಂಗಸುಗೂರು

Related Articles

Leave a Reply

Your email address will not be published. Required fields are marked *

Back to top button