ಸ್ಯಾಂಡಲ್ವುಡ್ ಸಿನಿಮಾಗಳಿಗೆ ದಶಕಗಳಿಂದ ಕೆಜಿ ರಸ್ತೆಯ ಚಿತ್ರಮಂದಿರಗಳೇ ಮುಖ್ಯ ಚಿತ್ರಮಂದಿರಗಳು (Main Theaters). ಅದೆಷ್ಟೇ ಮಲ್ಟಿಪ್ಲೆಕ್ಸ್ಗಳು ಬರಲಿ, ಥಿಯೇಟರ್ಗಳು ಎದ್ದೇಳಲಿ, ಆದರೆ ಕೆಂಪೇಗೌಡ ರಸ್ತೆಯ ಥಿಯೇಟರ್ಗಳಲ್ಲಿ ರಿಲೀಸ್ ಆಗದಿದ್ದರೆ, ಆ ಸಿನಿಮಾ ತೆರೆಗೆ ಬಂದಿಲ್ಲ ಎನ್ನುವಷ್ಟು ನಂಬಿಕೆ.
ಹೀಗಾಗಿಯೇ ಪ್ರತಿ ವಾರ ಕೆಜಿ ರಸ್ತೆಯ ಒಂದಲ್ಲಾ ಒಂದು ಥಿಯೇಟರ್ನಲ್ಲಿ ಹೊಸ ಸಿನಿಮಾ ರಿಲೀಸ್ ಆಗಿ, ಸಂಭ್ರಮ ಮನೆ ಮಾಡಿರುತ್ತೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಜಿ ರಸ್ತೆಯ ಕೆಲ ಪ್ರಮುಖ ಚಿತ್ರಮಂದಿರಗಳಿಗೆ ಬೀಗ ಬಿದ್ದಿದೆ. ಗೀತಾ, ಹಿಮಾಲಯ, ಅಲಂಕಾರ್, ಕಲ್ಪನಾ, ಸಾಗರ್, ಮೆಜೆಸ್ಟಿಕ್ ಥಿಯೇಟರ್ಗಳು ಬಂದ್ ಆಗಿವೆ. ಹೀಗಾಗಿಯೇ ಉಳಿದ ಥಿಯೇಟರ್ಗಳಿಗೆ ಬೇಡಿಕೆ ಹೆಚ್ಚು.
ಇದರ ನಡುವೆಯೇ ಕೊರೋನಾ ಎರಡನೇ ಅಲೆಯ (Corona Second Wave) ಲಾಕ್ಡೌನ್ ಅನ್ಲಾಕ್ ಆಗಿ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಂಪೂರ್ಣ ಆಸನ ಭರ್ತಿಗೆ ಅನುಮತಿ ಸಿಕ್ಕ ಬೆನ್ನಲ್ಲೇ ಕಾರಣಾಂತರಗಳಿಂದ ಸಂತೋಷ್, ನರ್ತಕಿ ಹಾಗೂ ಸಪ್ನಾ ಥಿಯೇಟರ್ಗಳೂ ಕಾರಣಾಂತರಗಳಿಂದ ಬಾಗಿಲು ಮುಚ್ಚಿವೆ. ಹೀಗಾಗಿಯೇ ಅಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಳು ಕೆಂಪೇಗೌಡ ರಸ್ತೆಯ ಬೇರೆ ಬೇರೆ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿವೆ. ಈಗ ಈ ಬೆಳವಣಿಗೆ ಚಿತ್ರತಂಡಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.