ನಾರಿ ಶಕ್ತಿಗೆ ಬಲತುಂಬಿದ ಸ್ವಚ್ಚತಾ ಯೋಜನೆ

ಗ್ರಾಮ ಪಂಚಾಯತಿ ಸ್ವಚ್ಚತಾ ವಾಹನಗಳಿಗೆ
ಮಹಿಳಾ ಸವಾರರೆ ಸಾರತಿಗಳು.
ಮಸ್ಕಿ : ಸಾಮಾನ್ಯವಾಗಿ ಮಹಿಳೆಯರು ಮನೆಗೆಲಸ ನೋಡಿಕೊಳ್ಳುವುದು ಮತ್ತು ಪುರುಷರು ಹೊರಗಡೆ ಹೋಗಿ ದುಡಿದು ಮನೆಯನ್ನು ನಿಭಾಯಿಸುವುದು ಲೋಕ ರೂಢಿ. ಆದರೆ ಇದೀಗ ಮಹಿಳೆ ಬರೀ ಮನೆಯ ನಾಲ್ಕು ಗೋಡೆಯ ಒಳಗೆ ಸೀಮಿತವಾಗಿಲ್ಲ.
ಇದೇ ರೀತಿ ತಾಲೂಕಿನ ಗ್ರಾಮ ಪಂಚಾಯತಿ ಯಲ್ಲಿ ಬರುವ ಸಂಜೀವಿನಿ ಮಹಿಳಾ ಸಂಘದ ಸದಸ್ಯರು
ಈಗ ಪುರುಷ ಸಮಾನವಾಗಿ ದುಡಿಮೆ ಮಾಡಿ ತನ್ನ ಕುಟುಂಬ ನಿರ್ವಹಣೆಯಲ್ಲಿ ಆಸರೆಯಾಗಿದ್ದಾರೆ.

ಹೌದು,ನಿತ್ಯ ಬೆಳಿಗ್ಗೆ ಹೀಗೆ ‘ಸ್ವಚ್ಛತಾ ವಾಹಿನ’ದ ಧ್ವನಿವರ್ಧಕ ಮೂಲಕ ಹೊರಡುವ ಈ ಹಾಡು ಕೇಳಿದಾಕ್ಷಣ ಗ್ರಾಮಸ್ಥರು ಕಸ ತಂದು ಹಾಕುವುದಷ್ಟೆ ಅಲ್ಲ, ಮೂಗಿನ ಮೇಲೂ ಬೆರಳಿಟ್ಟು ನೋಡುತ್ತಾರೆ. ಏಕೆಂದ್ರೆ, ಕಸ ಸಂಗ್ರಹಿಸುವ ಈ ವಾಹಿನಿಗೆ ಹೆಣ್ಣು ಮಕ್ಕಳೇ ಡ್ರೈವರ್. ಅಷ್ಟೇ ಅಲ್ಲ, ಆ ಚಾಲಕಿಗೆ ಸಹಾಯಕಿಯೂ ಮಹಿಳೆಯೇ !
ರಾಯಚೂರು ಜಿಲ್ಲಾಡಳಿತವು ಮಸ್ಕಿ
ತಾಲೂಕಿನ 21 ಗ್ರಾಮ ಪಂಚಾಯತಿ ಗಳಲ್ಲಿ ಬರುವ,ಪಾಮನ ಕಲ್ಲೂರು,ಬಪ್ಪರೂ,, ವಟಗಲ್ ಗುಡುದೂರು, ಮೆದಿಕಿನಾಳ, ಹೊಕ್ರಾಣಿ,
ಕೊಳಬಾಳ,ಸೇರಿದಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ‘ಸಂಜೀವಿನಿ’ ಯೋಜನೆ ಗುಂಪಿನಲ್ಲಿರುವ ಮಹಿಳೆಯರಿಗೆ ಗ್ರಾಮ ನೈರ್ಮಲ್ಯ ಕಾರ್ಯದ ಜವಾಬ್ದಾರಿ ನೀಡಿದೆ.
ಪುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎನ್ನುತ್ತಾ ಮಹಿಳೆಯರು ಕೆಲಸ ಆರಂಭಿಸಿರುವ ಮಹಿಳೆಯರು, ಗ್ರಾಮದ ಸ್ವಚ್ಛತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಪಿಯುಸಿವರೆಗೆ ಓದಿರುವ ಇವರಲ್ಲಿ ಬಹುತೇಕರು ಮೂಲತಃ ಕೃಷಿ ಕಾರ್ಮಿಕರು. ಇವರೆಲ್ಲರಿಗೂ ಸದ್ಯ ಉದ್ಯೋಗ ದೊರೆತಿರುವ ಸಂಭ್ರಮ ಒಂದೆಡೆಯಾದರೆ, ಇನ್ನೊಂದೆಡೆ ನಾವು ವಾಹನ ಓಡಿಸುವುದರ ಮೂಲಕ ಗ್ರಾಮ ಸ್ವಚ್ಛತೆಯ ಜವಾಬ್ದಾರಿ ಪಡೆದಿದ್ದೇವೆ ಎಂಬ ಅಭಿಮಾನ. ಈ ಅಭಿಮಾನವೇ ಗ್ರಾಮಗಳ ಸ್ವಚ್ಛತೆಗೆ ಕಾರಣವಾಗಿದೆ. ಜತೆಗೆ ಸ್ಥಳೀಯ ಮಹಿಳೆಯರಿಗೆ ಈ ಕೆಲಸ ನೀಡಿದ್ದು, ಗ್ರಾಮಸ್ಥರ ಸ್ವಚ್ಛತಾ ಕಳಕಳಿ ಇಮ್ಮಡಿಗೊಳ್ಳಲು ಕಾರಣವಾಗಿದೆ.
ವಾಹನಕ್ಕೆ ಒಬ್ಬ ಚಾಲಕಿ, ಸಹಾಯಕಿ
ಪ್ರತಿ ವಾಹನಗಳಲ್ಲಿ ಚಾಲಕಿಯ ಜತೆಗೆ ಒಬ್ಬ ಸಹಾಯಕಿ ಇದ್ದು, ಗ್ರಾಮಸ್ಥರು ತರುವ ಕಸವನ್ನು ವಾಹನಕ್ಕೆ ಹಾಕುವುದು ಅವರ ಕೆಲಸವಾಗಿದೆ. ಕಸ ತುಂಬಿಕೊಂಡ ವಾಹನ ಗ್ರಾಮದ ಹೊರಭಾಗದಲ್ಲಿರುವ ಕಸ ನಿರ್ವಹಣಾ ಘಟಕಕ್ಕೆ ಸಾಗುತ್ತದೆ.ಅಲ್ಲಿ ಲಲಿತಮ್ಮ,ಗಂಗಮ್ಮ,
ಸೇರಿದಂತೆ ನಾಲ್ಕಾರು ಮಹಿಳೆಯರು ತಂದ ಕಸದಲ್ಲಿ ಒಣ ಕಸ ಬೇರ್ಪಡಿಸಿ ಪ್ಲಾಸ್ಟಿಕ್, ಗಾಜು, ರಟ್ಟು, ತಗಡು.. ಹೀಗೆ ವಿಂಗಡಣೆ ಮಾಡುತ್ತಾರೆ.
ಈ ತಂಡದ ಸದಸ್ಯೆ ಕೊಳಬಾಳ
ಗ್ರಾಮದ ಶಿವಮ್ಮ ಆರಂಭದಲ್ಲಿ ವಾಹನ ಚಾಲನೆಗೆ ಮುಜುಗರ ತೋರಿದ್ದರು. ಆದರೆ ಸಂಜೀವಿನಿ ಮಹಿಳಾ ಸಂಘ ಹಾಗೂ ಗ್ರಾಮ ಪಂಚಾಯತಿ ಸಹಕಾರ ಮತ್ತು ಗ್ರಾಮಸ್ಥರ ಪ್ರೋತ್ಸಾಹದಿಂದಾಗಿ ಇದೀಗ ನಿರ್ಭೀತಿಯಿಂದಾಗಿ ವಾಹನ ಚಾಲನೆ ಮಾಡುತ್ತಿದ್ದಾರೆ. ಕಿರಿದಾದ ಓಣಿಯಲ್ಲಿ, ಅದೂ ಆಚೀಚೆ ಕಟ್ಟಿದ ದನಕರುಗಳ ಮಧ್ಯೆ ನಾಜೂಕಿನಿಂದ ವಾಹನ ಚಾಲನೆ ಮಾಡುತ್ತಾರೆ. ವಾಹನ ಚಾಲನೆ ಮಾಡಿಕೊಂಡು ಬರುವುದನ್ನು ಕಂಡ ಗ್ರಾಮಸ್ಥರು, ಈಗ ಆಕೆಗೆ ತೊಂದರೆಯಾಗಬಾರದು ಎಂದು ರಸ್ತೆ ವಿಶಾಲಗೊಳಿಸಿ ವಾಹನ ಚಾಲನೆಗೆ ಅನುವು ಮಾಡಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ಬಡತನ ಮತ್ತು ಇಡೀ ಕುಟುಂಬದ ಹೊಣೆಗಾರಿಕೆಯನ್ನು ಮಹಿಳೆಯೂ ಸಹ ಸಮರ್ಥವಾಗಿ ಎದುರಿಸಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ವರದಿ : ಸಿದ್ದಯ್ಯ ಹೆಸರೂರು tv8kannada ಮಸ್ಕಿ