ರಾಜ್ಯ

Karnataka Budget 2025: ಕಲ್ಯಾಣ ಕರ್ನಾಟಕ ಭಾಗಕ್ಕೆ ಭರ್ಜರಿ ಗಿಫ್ಟ್‌ ಕೊಟ್ಟ ಸಿದ್ದರಾಮಯ್ಯ

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿನ ಮೂರನೇ ಬಜೆಟ್ ಇದಾಗಿದ್ದು, ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭರ್ಜರಿ ಉಡುಗೊರೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 10 ಕೋಟಿ ರೂ.ಅನುದಾನವನ್ನು ಪ್ರಥಮ ಹಂತದಲ್ಲಿ ನೀಡಲಾಗುವುದು. ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು KKRDB ವತಿಯಿಂದ 50 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು KKRDB ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುವುದು. KKRDB ವತಿಯಿಂದ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನವನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ. KKRDB ಸಹಯೋಗದಿಂದ ಗ್ರಾಮೀಣ ಉಗ್ರಾಣಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಅನುವಾಗುವಂತೆ ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದು. ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್‌ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆ.ಜಿ.ಎಫ್‌. ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರಮಿಕರು ಮೃತರಾದಾಗ ಅವರ ವಾರಸುದಾರರಿಗೆ ಒಂದು ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತಿದ್ದು, ಸದರಿ ವಿಮಾ ಮೊತ್ತವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.

ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ Satellite Market ಅನ್ನು ಸ್ಥಾಪಿಸಲಾಗುವುದು. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 376 ಕೋಟಿ ರೂ. ಸಹಾಯಾನುದಾನವನ್ನು ಹಿಂದಿನ ಆಯವ್ಯಯದಲ್ಲಿ ಘೋಷಿಸಿದ್ದೇನೆ. ಅದರಂತೆ, ಈಗಾಗಲೇ 329 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, ಬಾಕಿ ಇರುವ 47 ಕೋಟಿ ರೂ. ಮೊತ್ತವನ್ನು ಒದಗಿಸಲಾಗುವುದು.2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್‌ ಶೇ.58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. 2023-24ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ (DCC) ಹಾಗೂ ಪಿಕಾರ್ಡ್‌ (PCARD) ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ.ಯಶಸ್ವಿನಿ ಯೋಜನೆಯಡಿ ಇಲ್ಲಿಯವರೆಗೆ 700 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಈ ಆಸ್ಪತ್ರೆಗಳಲ್ಲಿ ಇದುವರೆಗೂ ರಾಜ್ಯಾದ್ಯಂತ 59,000 ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿರುತ್ತಾರೆ.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 93 ಕೋಟಿ ರೂ.ಗಳಷ್ಟು ಬಿಡುಗಡೆ ಮಾಡಿ, ರಾಜ್ಯದಲ್ಲಿ 110 ಸಂಘಗಳ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, 3,000 ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ.ಗಳಂತೆ ಒಟ್ಟು 138 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಇದರಿಂದ, ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್‌, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ.ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ. ಗಳಿಂದ 15,000 ರೂ. ಗಳಿಗೆ ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು.

Related Articles

Leave a Reply

Your email address will not be published. Required fields are marked *

Back to top button